Advertisement

ರಾಣಿ ಅಬ್ಬಕ್ಕ ಪ್ರತಿಮೆ ರಚಿಸಿದ ಕಲಾವಿದ ಅಜ್ಞಾತ !

12:00 PM Feb 04, 2018 | |

ಉಳ್ಳಾಲ: ಉಳ್ಳಾಲ ಎಂದಾಕ್ಷಣ ನೆನಪಾಗುವುದು ಭಾರತದ ಪ್ರಥಮ ಸ್ವಾತಂತ್ರ್ಯ ಸೇನಾನಿ, ತೌಳವ ರಾಣಿ ವೀರರಾಣಿ ಅಬ್ಬಕ್ಕ.ಧರ್ಮ ಸಮನ್ವಯದ ಬೀಡಾಗಿರುವ ಉಳ್ಳಾಲದ ಹೃದಯ ಭಾಗವನ್ನು ತಲುಪಿದಾಗ ಬೃಹತ್‌ ಅಬ್ಬಕ್ಕ ವಿಗ್ರಹವನ್ನು ಕಂಡು ರೋಮಾಂಚನ ವಾಗುತ್ತದೆ. ಈ ಮನೋಜ್ಞ ಪ್ರತಿಮೆ ಯನ್ನು ನಿರ್ಮಿಸಿದ ಕಲಾವಿದ ಉಮೇಶ್‌ ಬೋಳಾರ ಅವರನ್ನು ಅಬ್ಬಕ್ಕ ಉತ್ಸವ ಸಮಿತಿಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಗುರುತಿಸಿಲ್ಲ.

Advertisement

ಕಳೆದ 40 ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಉಮೇಶ್‌ ಬೋಳಾರ ಅವರು ಮಂಗಳೂರಿನ ಬೋಳಾರದಲ್ಲಿ ಜನಿಸಿದವರು. ಪ್ರಸ್ತುತ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನೆಲೆಸಿದ್ದಾರೆ. ಜಿಲ್ಲೆಯ ವಿವಿಧೆಡೆ ಗಣೇಶ ವಿಗ್ರಹ ಗಳನ್ನು ರಚಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ಅಬ್ಬಕ್ಕನ ಪ್ರತಿಮೆ
ಸುಮಾರು 35 ವರ್ಷಗಳ ಹಿಂದೆ ಉಳ್ಳಾಲ ಜಂಕ್ಷನ್‌ನಲ್ಲಿ ನಿಯಮಿತವಾಗಿ ಕ್ರಿಕೆಟ್‌ ಆಟವಾಡುತ್ತಿದ್ದ ವಿದ್ಯಾರಣ್ಯ ಯುವಕ ಸಂಘದ ಸದಸ್ಯರು ಮೂರು ರಸ್ತೆ ಸೇರುವಲ್ಲಿ ಕಾಂಕ್ರೀಟ್‌ ರಿಂಗ್‌ ಇರಿಸುವ ಮೂಲಕ ಇದು ಅಬ್ಬಕ್ಕ ವೃತ್ತ ಎಂದು ಗುರುತಿಸಿಕೊಳ್ಳುವುದಕ್ಕೆ ಕಾರಣರಾದರು. ಸ್ಥಳೀಯ ಪೈಂಟರ್‌ ಪ್ರಭಾಕರ್‌ ಮತ್ತು ಮಹಾಬಲ ಶೆಟ್ಟಿಗಾರ ಅವರು ಈ ಕಾಂಕ್ರೀಟ್‌ ರಿಂಗ್‌ನಲ್ಲಿ ಅಬ್ಬಕ್ಕ ವೃತ್ತ ಎಂದು ಬರೆಯುವ ಮೂಲಕ ವೃತ್ತಕ್ಕೆ ಅಬ್ಬಕ್ಕನ ಹೆಸರು ಒದಗಿತು. ಹಲವಾರು ವರ್ಷಗಳ ಬಳಿಕ ಬಿಜೆಪಿ ಮುಖಂಡ ಬಾಬು ಬಂಗೇರ ಅವರು ಪ್ರಭಾರ ಮಂಡಲ ಪ್ರಧಾನರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಶಾಶ್ವತ ವೃತ್ತ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಇನ್ನೋರ್ವ ಮುಖಂಡ ಸೀತಾರಾಮ ಬಂಗೇರ ನೇತೃತ್ವದಲ್ಲಿ ಯುವ ಮುಂದಾಳು ಭರತ್‌ ಉಳ್ಳಾಲ ಅವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಬ್ಬಕ್ಕನ ಪ್ರತಿಮೆ ನಿರ್ಮಿಸಲು ಯೋಚಿಸಿದರು. ಪ್ರತಿಮೆ ರಚಿಸಲು ಸೂಕ್ತ ಕಲಾವಿದನ ಹುಡುಕಾಟ ನಡೆದು, ಉಮೇಶ್‌ ಬೋಳಾರ ಅವರಿಗೆ ಜವಾಬ್ದಾರಿ ವಹಿಸ ಲಾಯಿತು. ರಾಣಿ ಅಬ್ಬಕ್ಕನ ನೈಜ ರೂಪ ಹೇಗಿತ್ತು ಎಂಬುದಕ್ಕೆ ಪುರಾವೆ ಇರದ ಕಾರಣ ಉಮೇಶ್‌ ಅವರು ಅಬ್ಬಕ್ಕ ರಾಣಿಗೆ ಸಂಬಂಧಿಸಿದ ಪುಸ್ತಕಗಳನ್ನು ಪರಾಮರ್ಶಿಸಿ, ಚಾರಿತ್ರಿಕ ವಿವರಗಳನ್ನು ಮನನ ಮಾಡಿ ಅಬ್ಬಕ್ಕನ ರೂಪವನ್ನು ನೈಜತೆಗೆ ನಿಕಟವಾಗಿ ಕಲ್ಪಿಸಿಕೊಂಡರು. ಅಬ್ಬಕ್ಕನ ಚಿತ್ರವನ್ನು ಬರೆದು ರಾಣಿಗೆ ಶಾಶ್ವತ ರೂಪ ನೀಡಿದರು. ಬಳಿಕ ಚಿತ್ರಕ್ಕೆ ಅನುಗುಣವಾಗಿ ಪ್ರತಿಮೆ ನಿರ್ಮಾಣವನ್ನು 6 ತಿಂಗಳಲ್ಲಿ ಪೂರೈಸಿದರು. ಇಂದು ಉಮೇಶ್‌ ಅವರು ರಚಿಸಿದ ರಾಣಿ ಅಬ್ಬಕ್ಕನ ಚಿತ್ರವೇ ಎಲ್ಲೆಡೆ ಬಳಕೆಯಾಗುತ್ತಿದೆ.

 ಕಲೆಯನ್ನು ಉದ್ಯೋಗವನ್ನಾಗಿಸಿಕೊಂಡು ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದೇನೆ. ಕಲಾವೃತ್ತಿಯನ್ನು ತ್ಯಜಿಸುವ ಸಂದರ್ಭ ಬಂದರೂ ಪತ್ನಿ ಮತ್ತು ಕುಟುಂಬದವರ ಪ್ರೋತ್ಸಾಹದಿಂದ ಮುಂದುವರಿದಿದ್ದೇನೆ. ಪ್ರಸ್ತುತ ಉಚಿತವಾಗಿ ಮಕ್ಕಳಿಗೆ ಕಲೆಯಲ್ಲಿ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ.      

Advertisement

– ಉಮೇಶ್‌ ಬೋಳಾರ, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next