ಭಾಲ್ಕಿ: ಮನುಷ್ಯನಿಗೆ ಹುಟ್ಟು-ಸಾವುಗಳು ಶಾಶ್ವತವಾಗಿವೆ. ಈ ಹುಟ್ಟು-ಸಾವು ಎರಡರ ಮಧ್ಯ ಬದುಕುವ ಕಲೆ ಬಹುಮುಖ್ಯ ಎಂದು ಶ್ರೀ ಗುರುಬಸವೇಶ್ವರ ಸಂಸ್ಥಾನದ ಮಠದ ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಮೊರಂಬಿ ಗ್ರಾಮದಲ್ಲಿ ಮಂಗಳವಾರ ನಡೆದ ನಂದಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮೊರಂಬಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಸವ ಇತಿಹಾಸದಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ. ಸುಮಾರು 20 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುವ ಕುರಿತು ಇಲ್ಲಿಯ ಹಿರಿಯರು ತಿಳಿಸಿದ್ದರು. ಅದು ಇಂದು ಅನುಷ್ಠಾನಗೊಂಡಿದೆ. ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಹುಟ್ಟು-ಸಾವಿನ ನಡುವೆ ಬದುಕುವ ಕಲೆ ಕಲೆತುಕೊಳ್ಳಬೇಕಿದೆ. ಅದಕ್ಕಾಗಿ ಇಂತಹ ಧಾರ್ಮಿಕ ಕಾರ್ಯಕ್ರಮ ಆಗಾಗ ನಡೆಯುತ್ತಿರಬೇಕು ಎಂದರು.
ಉಪನ್ಯಾಸಕ ಡಾ| ಶಿವರುದ್ರಪ್ಪ ವಾರದ ನಂದಿ ಬಸವಣ್ಣನವರ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು. ಡಾ| ರಾಜಶೇಖರ ಶಿವಾಚಾರ್ಯರು ಬೆಮಳಖೇಡ ನೇತೃತ್ವ ವಹಿಸಿ ಮಾತನಾಡಿದರು. ಷನ್ಮುಖಪ್ಪ ಉಚ್ಚೇಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೋಮನಾಥ ರಾಜೇಶ್ವರೆ ಗೋರ್ಟಾ, ಜಯರಾಜ.ವ್ಹಿ, ಬಸವೇಶ್ವರರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.
ಇದಕ್ಕೂ ಮುನ್ನ ಗ್ರಾಮದ ಸುಮಂಗಲೆಯರು ಕುಂಭ, ಕಳಸ ಹೊತ್ತು ನಂದಿ-ಬಸವೇಶ್ವರರ ಮೂರ್ತಿಗಳ ಭವ್ಯ ಮೆರವಣಿಗೆ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಿಂದ ನಂದಿ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು. ಬೆಮಳಖೇಡ ಹಿರೇಮಠ ಸಂಸ್ಥಾನದ ಪೀಠಾ ಧಿಪತಿ ಡಾ| ರಾಜಶೇಖರ ಸ್ವಾಮಿ ನೇತೃತ್ವ ವಹಿಸಿದ್ದರು. ಮೆರವಣಿಗೆಗೆ ಯುವ ಮುಖಂಡ ಡಿ.ಕೆ. ಗಣಪತಿ ಚಾಲನೆ ನೀಡಿದರು.
ಈ ವೇಳೆ ನಾಗನಾಥ ಮೇತ್ರೆ, ಸಿದ್ರಾಮ ಗುಂದಗೆ, ಅಶೋಕ ಸ್ವಾಮಿ, ವಿಜಯಕುಮಾರ ವಾರದ, ಅಶೋಕ ಉಚ್ಚೇಕರ ಸೇರಿದಂತೆ ಇತರರಿದ್ದರು. ಅವಿನಾಶ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಬಾಬುರಾವ್ ಕಾಗೆ ನಿರೂಪಿಸಿದರು. ಶಿವಾನಂದ ಮೇತ್ರೆ ವಂದಿಸಿದರು.