ದೇವನಹಳ್ಳಿ: ಕಳೆದ 4 ದಿನಗಳಲ್ಲಿ ಹೊರ ದೇಶಗಳಿಂದ ಒಟ್ಟು 627 ಪ್ರವಾಸಿಗರು ಸ್ವದೇಶಕ್ಕೆ ಮರಳಿದ್ದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ರವಾನಿಸಲಾಗಿದೆ. ಮೇ 11ರಿಂದ 15ರವರೆಗೆ ವಿವಿಧ ದೇಶಗಳಿಂದ ಪ್ರಯಾಣಿಕರು ಸ್ವದೇಶಕ್ಕೆ ಬಂದ ನಂತರ ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿನ ಕ್ವಾರೆಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಈ ವಿಮಾನ ನಿಲ್ದಾಣಕ್ಕೆ ಬಂದಂತಹ ಎಲ್ಲಾ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಜೊತೆಗೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಬೆಂಗಳೂರು ನಗರದ ವಿವಿಧ ಹೋಟೆಲ್, ರೆಸಾರ್ಟ್‌ಗಳಲ್ಲಿ 14 ದಿನ ಕ್ವಾರೆಂಟೈನ್ ಮಾಡಲಾಗುತ್ತದೆ.
ಯಾವ್ಯಾವ ದೇಶದಿಂದ ಬಂದಿದ್ದಾರೆ?: ಮೇ 11 ರಂದು ಬೆಳಗ್ಗೆ 4.45ಕ್ಕೆ ಲಂಡನ್ ನಿಂದ ದೆಹಲಿಗೆ ಆಗಮಿಸಿದ್ದರು. ನಂತರ, ಅಲ್ಲಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 326 ಪ್ರಯಾಣಿಕರು ಬಂದಿದ್ದರು. ಅದರಲ್ಲಿ 3 ಮಕ್ಕಳು ಸೇರಿದ್ದಾರೆ. ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದ ವ್ಯಕ್ತಿ ಶವವನ್ನು ತರಲಾಗಿತ್ತು. ಮೇ 12ರ ರಾತ್ರಿ 9ಗಂಟೆ ವೇಳೆ ಸಿಂಗಾಪುರ್‌ನಿಂದ 42 ಹಾಗೂ ಮೇ 13ರಂದು ಸಿಂಗಪೂರ್‌ನಿಂದ 152 ಜನ ಬಂದಿಳಿದಿದ್ದಾರೆ.
ಮೇ 15ರ ಬೆಳಗ್ಗೆ 9.30ಕ್ಕೆ ಸ್ಯಾನ್ ಫ್ರಾನ್ಸಿಸ್ಕೋದಿಂದ 107 ಕನ್ನಡಿಗರು ಬಂದಿದ್ದು, ಅದರಲ್ಲಿ ಪುರುಷ 59, 48 ಮಹಿಳಾ ಪ್ರಯಾಣಿಕರು, ಗರ್ಭೀಣಿ ಹಾಗೂ 10 ವರ್ಷದೊಳಗಿನ ಮಗು ಸೇರಿದ್ದಾರೆ. 107 ಜನರ ಆರೋಗ್ಯ ತಪಾಸಣೆ ವೇಳೆ ಒಬ್ಬ ಪುರುಷ ಪ್ರಯಾಣಿಕನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ನೇರವಾಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿನ ರಾಜೀವ್‌ಗಾಂಧಿ ಹೃದಯ ರೋಗ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಬರುವ ಎಲ್ಲಾ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಎಲ್ಲಾ ಪ್ರಯಾಣಿ ಕರನ್ನೂ ವ್ಯವಸ್ಥಿತವಾಗಿ ಬಿಎಂಟಿಸಿ ಬಸ್ ಗಳಲ್ಲಿ ಅವರು ಉಳಿದುಕೊಳ್ಳುವ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ ಕಾಯ್ದುಕೊಳ್ಳಿ: ಪ್ರಯಾಣಿಕರು ವಿಮಾನ ಹತ್ತುವಾಗ ಮತ್ತು ವಿಮಾನದಿಂದ ನಿರ್ಗಮಿಸುವಾಗ ಟರ್ಮಿನಲ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಟರ್ಮಿನಲ್‌ನ ಎಲ್ಲೆಡೆ ಮತ್ತು ಆಹಾರ ಮತ್ತು ಪೇಯಗಳ ಮಳಿಗೆಗಳಲ್ಲಿ ಆಸನ ವ್ಯವಸ್ಥೆಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರೋತ್ಸಾಹ ನೀಡುವಂತೆ ಪುನರ್ ರಚಿಸಲಾಗಿದ್ದು ಈ ಪ್ರದೇಶವನ್ನು ಬಿಐಎಎಲ್ ಸಿಬ್ಬಂದಿ ನಿಭಾಯಿಸುತ್ತಾರೆಂದು ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಮಾರರ್ ಹೇಳಿದರು.
ಕಳೆದ 4 ದಿನಗಳಿಂದ ವಿದೇಶಗಳಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಹೆಚ್ಚಿನ ಕ್ರಮಕೈಗೊಳ್ಳಲಾಗಿದೆ. ಇದುವರೆಗೂ ಒಂದು ಪ್ರಕರಣ ಬಿಟ್ಟರೇ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ. ಹಂತ ಹಂತವಾಗಿ ಪ್ರಯಾಣಿಕರು ಬರುವವರಿದ್ದಾರೆ.
-ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
* ಎಸ್.ಮಹೇಶ್