ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಎಲೆಕ್ಟ್ರಿಶಿಯನ್ ಮಿಥಾಯಿ ಚಂದ್ರಶೇಖರ್ ಕೊಲೆ ಪ್ರಕರಣವನ್ನು ಭೇದಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೀಮಂತ್ ಕುಮಾರ್ ಸಿಂಗ್, ಬಿರೇಶ್ ಸಿಂಗ್ ಬಂಧಿತರು. ಕಗ್ಗದಾಸಪುರ ಮುಖ್ಯ ರಸ್ತೆಯ ಪೂರ್ವಂಕರ ಸೀಸನ್ ಪ್ರಾಜೆಕ್ಟ್ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಸೆ.21ರಂದು ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಕೊಲೆ ಪ್ರಕರಣ ಪತ್ತೆಯಾಗಿತ್ತು.
ಈ ಕುರಿತು ನಾಪತ್ತೆ ಪ್ರಕರಣ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಅನುಮಾನದ ಮೇರೆಗೆ ಚಂದ್ರಶೇಖರ್ ಸಹೋದರ ಸಂಬಂಧಿಗಳಾದ ಇಬ್ಬರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದಾರೆ. ಆರೋಪಿ ಸೀಮಂತ್ ಕುಮಾರ್ ಪತ್ನಿ ಜೊತೆ ಮಿಥಾಯಿ ಚಂದ್ರಶೇಖರ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.
ಇದರಿಂದ ಕೋಪಗೊಂಡಿದ್ದ ಸೀಮಂತ್, ತನ್ನ ಸ್ನೇಹಿತ ಬೀರೇಶ್ ಜತೆಗೂಡಿ ಚಂದ್ರುಗೆ ಕಂಠಪೂರ್ತಿ ಮದ್ಯ ಕುಡಿಸಿ ಕತ್ತುಬಿಗಿದು ಕೊಲೆಗೈದಿದ್ದರು. ಬಳಿಕ ಒಂದು ದಿನ ಪೂರ್ತಿ ಕೊಠಡಿಯಲ್ಲಿಯೇ ಶವ ಇಟ್ಟುಕೊಂಡಿದ್ದ ಆರೋಪಿಗಳು, ಕೊಳಚೆ ನೀರು ಶುದ್ಧೀಕರಣ ಘಟಕದ ಪೈಪ್‌ಗೆ ಶವದ ಮೂಟೆ ಹಾಕಿದ್ದರು. ಒಂದು ತಿಂಗಳ ಬಳಿಕ ಶವದ ವಾಸನೆ ಬಂದಾಗ, ಅಲ್ಲಿನ ವ್ಯವಸ್ಥಾಪಕ ಪರಿಶೀಲಿಸಿದಾಗ ಗುರುತು ಸಿಗದ ರೀತಿಯಲ್ಲಿ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ಚಂದ್ರಶೇಖರ್ ಕೊಲೆ ಮಾಡಿದ ಬಳಿಕ ರೂಂ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು. ಸ್ಥಳೀಯರ ನೀಡಿದ ಮಾಹಿತಿ ಕಲೆ ಹಾಕಿ ಆರೋಪಿಗಳ ದೂರವಾಣಿ ಕರೆಗಳನ್ನು ಆಧರಿಸಿ ಬಂಧಿಸಿದಾಗ ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.