ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿ ವಿವಿಧ ಭಾಗಗಳಲ್ಲಿ 25ಕ್ಕೂ ಹೆಚ್ಚು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಮೂಲದ ಮೊಹಮ್ಮದ್ ರಫೀಕ್ (29) ತೌಫ್ ಸಾದೀಕ್ (27) ಬಂಧಿತರು.
ನವೆಂಬರ್ 13ರಂದು ಮುಂಜಾನೆ 6.30ರ ಸುಮಾರಿಗೆ ಮಲ್ಲೇಶ್ವರಂ ಬಳಿಯ ಹೋಟೆಲ್ ಲಿಫ್ಟ್ ಬಳಿ ಮಹಿಳೆಯೊಬ್ಬರು ಕಾಯುತ್ತಿದ್ದ ವೇಳೆ ಅವರನ್ನು ತಳ್ಳಿದ್ದ ಇಬ್ಬರೂ ಆರೋಪಿಗಳು ಆಕೆಯ ಕತ್ತನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ 25 ಸರಗಳ್ಳತನ ಪ್ರಕರಣಗಳು ಮತ್ತು 3 ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಗಳಿಂದ 3.4 ಲಕ್ಷ ರೂ. ಮೌಲ್ಯದ 123 ಗ್ರಾಂ ಚಿನ್ನಾಭರಣ, ಒಂದು ಪಲ್ಸರ್ ಬೈಕ್ ಜಪ್ತಿ ಮಾಡಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲೇಶ್ವರಂನಲ್ಲಿ ಸರಕಳವು ಮಾಡುವ ಹಿಂದಿನ ದಿನ ಮಡಿವಾಳದಲ್ಲಿ ಪಲ್ಸರ್ ಬೈಕ್ ಕದ್ದಿದ್ದರು.
ಆರೋಪಿ ಮೊಹಮ್ಮದ್ ರಫೀಕ್ ಹಲವು ವರ್ಷಗಳಿಂದ ಸರಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು ಸಂಬಂಧಿಕನಾದ ಸಾದೀಕ್‌ನನ್ನು ಜತೆಗೆ ಸೇರಿಸಿಕೊಂಡಿದ್ದ. ಒಬ್ಬ ಬೈಕ್ ಚಲಾಯಿಸಿದರೆ ಮತ್ತೂಬ್ಬ ಮಹಿಳೆಯರ ಸರ ಕಿತ್ತುಕೊಳ್ಳುತ್ತಿದ್ದ. ಕಳವು ಆಭರಣಗಳಲ್ಲಿ ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.