ಬೆಂಗಳೂರು: ಒಂಟಿ ಮಹಿಳೆಯರಿಗೆ ಚಾಕು ತೋರಿಸಿ ಸರಗಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹೆಬ್ಟಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗವಾರದ ಸೈಫ್ ಖಾನ್, ಹೆಗಡೆ ನಗರದ ಸಬ್ದರ್ ಅಹಮದ್, ಗೋದಾಮಪುರದ ನಯಾಬ್ ಬಂಧಿತರು.
ಆರೋಪಿಗಳ ಬಂಧನದಿಂದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದಿದ್ದ ಮನೆ, ಸರಗಳವು, ಸುಲಿಗೆ, ಬೈಕ್ ಕಳ್ಳತನ ಸೇರಿದಂತೆ 10 ಪ್ರಕರಣಗಳು ಬೆಳಕಿಗೆ ಬಂದಿದ್ದು, 9.5 ಲಕ್ಷ ರೂ.ಮೌಲ್ಯದ 175 ಗ್ರಾಂ. ಚಿನ್ನಾಭರಣ ಮತ್ತು 4 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಕೆಲ ವರ್ಷಗಳ ಹಿಂದೆ ಸರಗಳವು ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದ ಮೂವರೂ, ಕದ್ದ ಬೈಕ್‌ಗಳಲ್ಲಿ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನಿಟ್ಟುಕೊಂಡು ಮುಂಜಾನೆ 5ರಿಂದ 6 ಗಂಟೆ ನಡುವೆ ನಗರದ ಹಲವು ಭಾಗಗಳಲ್ಲಿ ಸುತ್ತಾಡುತ್ತಿದ್ದರು.
ಒಂಟಿ ಮಹಿಳೆಯರು ವಾಯು ವಿಹಾರಕ್ಕೆ ಹೋಗುತ್ತಿದ್ದರೆ ಬಸ್‌ಗೆ ಕಾಯುತ್ತಿದ್ದರೆ ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಸರ ಕಿತ್ತುಕೊಳ್ಳುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದರು.
ಜ.22ರಂದು ಮುಂಜಾನೆ 6 ಗಂಟೆ ಸುಮಾರಿಗೆ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದ ಶಂಕರಿ ಎಂಬ ಮಹಿಳೆಗೆ ಚಾಕು ತೋರಿಸಿ ಸರಗಳವು ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದ ಕೃತ್ಯಗಳ ಬಗ್ಗೆ ಬಾಯ್ಬಿಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.