ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದ ಸ್ನೇಹಿತನಿಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಯುವಕನನ್ನು ಪಿಂಕ್ ಹೊಯ್ಸಳ ಸಿಬ್ಬಂದಿ ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಆಹೋನ್ ರಾಯ್(26) ಬಂಧಿತ. ಗಾಯಾಳು ವಿವೇಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವೇಕ್ ಮತ್ತು ರಾಯ್ ಸ್ನೇಹಿತರಾಗಿದ್ದು, ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ವಿದ್ಯಾಭ್ಯಾಸದ ವೇಳೆಯೇ ರಾಯ್ ಮತ್ತು ವಿವೇಕ್ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ಯುವತಿ ರಾಯ್ ಕಡೆ ಹೆಚ್ಚು ಒಲವು ತೋರಿದ್ದಳು. ಈ ನಡುವೆ ಶುಕ್ರವಾರ ರಾತ್ರಿ ವಿವೇಕ್, ಗಾರ್ಡನ್ ಸಿಟಿ ಕಾಲೇಜು ಬಳಿಯ ಯುವತಿ ಮನೆ ಬಳಿ ಹೋಗಿ ಮೊಬೈಲ್ ಚಾರ್ಜರ್‌ಗಾಗಿ ಕರೆ ಮಾಡಿದ್ದಾನೆ.
ಇದೇ ವೇಳೆ ಯುವತಿಯ ಮನೆಯಲ್ಲಿದ್ದ ರಾಯ್ ಕರೆ ಸ್ವೀಕರಿಸಿ ಮನೆಗೆ ಬರುವಂತೆ ಸೂಚಿಸಿದ್ದಾನೆ. ಅದರಂತೆ ಮನೆಯೊಳಗೆ ಬಂದ ವಿವೇಕ್‌ಗೆ, ಆರೋಪಿ ರಾಯ್ ವಿನಾ ಕಾರಣ ನನ್ನ ಹುಡುಗಿಗೆ ತೊಂದರೆ ಕೊಡುತ್ತೀಯಾ ಎಂದು ಅಡುಗೆ ಮನೆಯಲ್ಲಿದ್ದ ಚಾಕು ತಂದು ಇರಿಯಲು ಯತ್ನಿಸಿದ್ದಾನೆ. ಆದರೆ, ವಿವೇಕ್ ಕೈ ಅಡ್ಡ ಕೊಟ್ಟಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಆದರೂ ಬಿಡದ ರಾಯ್ ವಿವೇಕ್‌ನ ತೊಡೆ ಭಾಗಕ್ಕೆ ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ರಾಯ್‌ನಿಂದ ತಪ್ಪಿಸಿಕೊಂಡ ವಿವೇಕ್ ಸ್ಥಳದಿಂದ ಓಡಿದ್ದಾನೆ. ಈತನನ್ನು ಹಿಂಬಾಲಿ ಸಿಕೊಂಡು ರಾಯ್ ಚಾಕು ಹಿಡಿದು ಹೋಗುತ್ತಿದ್ದ. ಇದನ್ನು ಕಂಡ ಸಾರ್ವಜನಿಕರೊಬ್ಬರು ಪೊಲೀಸ್ ಸಹಾಯವಾಣಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸ್ಥಳಕ್ಕೆ ಬಂದ ಪಿಂಕ್ ಹೊಯ್ಸಳ ಸಿಬ್ಬಂದಿ ಚಾಕು ಹಿಡಿದು ಹೋಗುತ್ತಿದ್ದ ರಾಯ್‌ನನ್ನು ಬಂಧಿಸಿದ್ದಾರೆ. ಗಾಯಗೊಂಡಿದ್ದ ವಿವೇಕ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಯ್ಸಳ ಕ್ಷಿಪ್ರ ಕಾರ್ಯಾಚರಣೆಗೆ ಶ್ಲಾಘನೆ
ಈ ಕಾರ್ಯಾಚರಣೆಯಲ್ಲಿ ಪಿಂಕ್ ಹೊಯ್ಸಳ ಸಿಬ್ಬಂದಿ ಮಾನಪ್ಪ, ಮಹಿಳಾ ಪೇದೆಧಿಗಳಾದ ಸುನೀತಾ ಮತ್ತು ಶ್ರೀದೇವಿ ಇದ್ದರು. ಈ ಕ್ಷಿಪ್ರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ಕೆ.ಆರ್.ಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.