ಬೆಂಗಳೂರು: ಜಾಮೀನು ಆಧಾರದಲ್ಲಿ ಜೈಲಿನಿಂದ ಹೊರಗಡೆ ಬಂದ 20 ದಿನಗಳ ಅಂತರದಲ್ಲೇ ಐದು ಮನೆಕಳ್ಳತನ ಮಾಡಿ ಚಿನ್ನಾಭರಣ ದೋಚಿದ್ದ ಸಂತೋಷ್ ಅಲಿಯಾಸ್ ಎಮ್ಮೆ (32) ಎಂಬಾತನನ್ನು ಬಂಧಿಸುವಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂತೋಷ್ ಬಂಧನದಿಂದ ಮೂರು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ.
ಸಂತೋಷ್‌ನಿಂದ ಕದ್ದ ಚಿನ್ನಾಭರಣ ಸ್ವೀಕರಿಸಿ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಪಿರಿಯಾಪಟ್ಟಣದ ಕೃಷ್ಣಮೂರ್ತಿ (45) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 27 ಲಕ್ಷ ರೂ. ಮೌಲ್ಯದ 700 ಗ್ರಾಂ. ಚಿನ್ನಾಭರಣ ಐದು ಕೆ.ಜಿ. ಬೆಳ್ಳಿ ವಸ್ತುಗಳು, ಒಂದು ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಮನೆಕಳ್ಳತನವನ್ನೇ ಕಸುಬು ಮಾಡಿಕೊಂಡಿರುವ ಸಂತೋಷ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ 70ಕ್ಕೂ ಅಧಿಕ ಪ್ರಕರಣ ಆರೋಪಿಯಾಗಿದ್ದಾನೆ. ಐಶಾರಾಮಿ ಜೀವನ ಹಾಗೂ ದುಶ್ಚಟಗಳಿಗಾಗಿ ಹಣ ಖರ್ಚು ಮಾಡಲು ಕಳವು ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ಹಗಲು ವೇಳೆಯಲ್ಲಿ ಬೈಕ್‌ನಲ್ಲಿ ದಕ್ಷಿಣ ವಿಭಾಗಗಳಲ್ಲಿ ತಿರುಗಾಡುತ್ತಿದ್ದ ಆರೋಪಿ ಸಂತೋಷ್, ಮನೆ ಮುಂದೆ ಬಿಡಿಸಿಟ್ಟ ರಂಗೋಲಿ , ದಿನಪತ್ರಿಕೆಗಳು ಹಾಗೆ ಉಳಿದುಕೊಂಡಿರುವುಂತಹ ಕೆಲವು ಮನೆಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಪುನಃ ರಾತ್ರಿ ವೇಳೆ ಒಬ್ಬನೇ ತೆರಳಿ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಜತೆ ಕಳ್ಳತನ ಮಾಡಲು ಯಾರನ್ನಾದರೂ ಸೇರಿಸಿಕೊಂಡರೆ ಪಾಲು ನೀಡಬೇಕು ಎಂದು ಲೆಕ್ಕಾಚಾರ ಹಾಕುತ್ತಿದ್ದ. ಹೀಗಾಗಿ, ಒಬ್ಬನೇ ಕಳ್ಳತನ ಮಾಡಿ ಪಿರಿಯಾ ಪಟ್ಟಣದ ಕೃಷ್ಣಮೂರ್ತಿ ಬಳಿ ನೀಡಿ ಹಣ ಪಡೆಯುತ್ತಿದ್ದ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆ ಆಗಿದ್ದ ಕೆಲವೇ ದಿನಗಳಲ್ಲಿ ಐದು ಮನೆಗೆ ಕನ್ನ ಹಾಕಿದ್ದಾನೆ. 27ನೇ ದಿನಕ್ಕೆ ಆತನನ್ನು ಬಂಧಿಸಿ ಪುನ; ಜೈಲಿಗೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ತಲಘಟ್ಟ ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳವು ಸೇರಿದಂತೆ ವಿವಿಧ ಮಾದರಿಯ 26 ಪ್ರಕರಣಗಳಿಗೆ ಸಂಬಂಧಿಸಿದಂತೆ, ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಟಿ. ಮಹದೇವ್, ಇನ್ಸ್‌ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ನೇತೃತ್ವದ ತಂಡವು, ಚಿನ್ನಾಭರಣ, ಬೆಳ್ಳಿ ವಸ್ತುಗಳು, ಎಂಟು ಬೈಕ್ ಸೇರಿ 58.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ಮಂದಿಯನ್ನು ವಸ್ತುಗಳನ್ನು ಬಂಧಿಸಿ 14 ಮಂದಿಯನ್ನು ಬಂಧಿಸಿದೆ.