ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯಿಸಿಕೊಂಡ ಟಿಕ್ಕಿಯೊಬ್ಬ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದಲ್ಲದೆ, ಆಕೆಯನ್ನು ಹತ್ಯೆಗೈಯಲು ಯತ್ನಿಸಿದ ಘಟನೆ ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಪಶ್ಚಿಮ ಬಂಗಾಳ ಮೂಲದ ಸುಮಾಭಾಯ್ (28) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಉತ್ತರ ಭಾರತ ಮೂಲದ 28 ವರ್ಷದ ಯುವತಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು.
ಪಶ್ಚಿಮ ಬಂಗಾಳದ ಕೊಲ್ಕೊತ್ತಾ ಮೂಲದ ಆರೋಪಿ, ಹೈದರಾಬಾದ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾಟ್ರಿಮೋನಿ ಮೂಲಕ 2016ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಯುವತಿಯನ್ನು ಪರಿಚಯಿಸಿಕೊಂಡಿದ್ದ. ಮೊದಲಿಗೆ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದ. ನಂತರ ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ, ಮನೆಯವರನ್ನೂ ಒಪ್ಪಿಸಿದ್ದರು.
2017ರ ಫೆಬ್ರವರಿಯಲ್ಲಿ ವಿವಾಹದ ದಿನಾಂಕ ಕೂಡ ನಿಗದಿಯಾಗಿತ್ತು. ಯುವತಿಯನ್ನು ನೋಡುವ ನೆಪದಲ್ಲಿ ಆಗಾಗ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ಆಕೆಯ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದ. ಈ ವೇಳೆ ಆಕೆ ಜತೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದರಿಂದ ಯುವತಿ ಗರ್ಭಿಣಿಯಾದಾಗ, ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿದ್ದ. ನಂತರ ಆರೋಪಿ ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಕೆಲಸ ಬಿಟ್ಟು, ಬೆಂಗಳೂರಿನ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿ, ಮದುವೆಯಾಗಬೇಕಿದ್ದ ಯುವತಿಯಿಂದ ದೂರವಾಗಲು ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಮತ್ತೂಬ್ಬ ಯುವತಿಯನ್ನು ಪರಿಚಯಿಸಿಕೊಂಡು, ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಸಂತ್ರಸ್ತೆಗೆ ಬೆದರಿಸುತ್ತಿದ್ದ.
ಆದರೂ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಈ ಮಧ್ಯೆ ಆರೋಪಿ ಕಳೆದ ಫೆಬ್ರವರಿಯಲ್ಲಿ ಯುವತಿ ಮನೆಯಲ್ಲಿದ್ದಾಗ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದರಿಂದ ನೊಂದ ಯುವತಿ ದೂರು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.