Advertisement

ಜೆಡಿಎಸ್‌ ಅಭ್ಯರ್ಥಿ ನಿವಾಸದ ಬಳಿ ಲಾಂಗ್‌ ತಂದವನ ಬಂಧನ

12:29 PM Apr 30, 2018 | Team Udayavani |

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ನಿವಾಸದ ಎದುರು ಲಾಂಗ್‌ ಹಿಡಿದು ನಿಂತಿದ್ದ ಮಜರ್‌ ಖಾನ್‌ (29) ಎಂಬಾತನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಶಾಂತಿನಗರದಲ್ಲಿರುವ ಶ್ರೀಧರ್‌ ರೆಡ್ಡಿ ನಿವಾಸದ ಬಳಿ ದ್ವಿಚಕ್ರ ವಾಹನದಲ್ಲಿ (ಸ್ಕೂಟಿ) ಆಗಮಿಸಿದ ನೀಲಸಂದ್ರ ನಿವಾಸಿ ಮಜರ್‌ಖಾನ್‌, ಅಲ್ಲಿದ್ದವರನ್ನು ಶ್ರೀಧರ್‌ ರೆಡ್ಡಿ ಎಲ್ಲಿ ಎಂದು ವಿಚಾರಿಸಿದ್ದಾನೆ. ಬಳಿಕ ತಾನು ಹಾಕಿಕೊಂಡಿದ್ದ ಜರ್ಕಿನ್‌ ತೆಗೆದು ಡಿಕ್ಕಿಯೊಳಕ್ಕೆ ಹಾಕಲು ಮುಂದಾದಾಗ ಡಿಕ್ಕಿಯಲ್ಲಿದ್ದ ಲಾಂಗ್‌ ಕೆಳಗೆ ಬಿದ್ದಿದೆ.

ಇದರಿಂದ ಆತಂಕಗೊಂಡ ಕಾರ್ಯಕರ್ತರು, ಮಜರ್‌ನನ್ನು ಸುತ್ತುವರಿದು ವಿಚಾರಿಸಿದಾಗ ಅನುಮಾಸ್ಪದವಾಗಿ ವರ್ತಿಸಿದ್ದರಿಂದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ತೆರಳಿ ಆತನನ್ನು ಬಂಧಿಸಿ ಅವನ ಬಳಿ ಇದ್ದ ಲಾಂಗ್‌, ದ್ವಿಚಕ್ರ ವಾಹನ, ರಾಜಕೀಯ ಪಕ್ಷಗಳ ಮುಖಂಡರ ವಿಸಿಟಿಂಗ್‌ ಕಾರ್ಡ್‌, ಕರಪತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಶೋಕನಗರ ಠಾಣೆ ಪೊಲೀಸರು ಹೇಳಿದ್ದಾರೆ.

ಶ್ರೀಧರ್‌ ರೆಡ್ಡಿ ನೀಡಿರುವ ದೂರಿನ ಸಂಬಂಧ ಮಜರ್‌ಖಾನ್‌ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಲಾಗಿದೆ. ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರು ಪಡೆಸಿ ಮೂರು ದಿನ ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮಜರ್‌ ಖಾನ್‌ ಗಾಂಜಾ ಸೇವನೆ ಚಟ ಹೊಂದಿರುವ ಸಾಧ್ಯತೆಯಿದ್ದು, ಶ್ರೀಧರ್‌ ರೆಡ್ಡಿ ನಿವಾಸದ ಬಳಿ ಬಂದಾಗ ಮತ್ತು ಬರುವ ಮಾತ್ರೆಗಳನ್ನು ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

Advertisement

ಆರೋಪಿ ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆ  ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಯಾವ ಉದ್ದೇಶಕ್ಕೆ ಆತ ಶ್ರೀಧರ್‌ ರೆಡ್ಡಿ ನಿವಾಸದ ಬಳಿ ಬಂದಿದ್ದ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಹಣ ಸಹಾಯ ಕೇಳಲು ಹೋಗಿದ್ದೆ: “ನನ್ನ ತಾಯಿಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಶಸ್ತ್ರಚಿಕಿತ್ಸೆಗೆ 30 ಸಾವಿರ ರೂ. ವೆಚ್ಚವಾಗಲಿದೆ. ಹೀಗಾಗಿ ಹಣದ ಸಹಾಯ ಯಾಚಿಸಿ ಬಿಜೆಪಿ ಅಭ್ಯರ್ಥಿ ವಾಸುದೇವ ಮೂರ್ತಿ ನಿವಾಸಕ್ಕೆ ತೆರಳಿ ಸಹಾಯ ಪಡೆದಿದ್ದೆ. ಕಾಂಗ್ರೆಸ್‌ ಅಭ್ಯರ್ಥಿ ಬಳಿಯೂ ಸಹಾಯ ಕೇಳಿದ್ದೆ.

ಹಾಗೇ ಸ್ನೇಹಿತ ಜಾನ್‌ ಎಂಬಾತ ಐದು ಮಂದಿಯ ವೋಟರ್‌ ಐಡಿ ತೆಗೆದುಕೊಂಡು ಶ್ರೀಧರ್‌ ರೆಡ್ಡಿ ಮನೆಗೆ ಬಾ. ಹಣ ಕೊಡಿಸುತ್ತೇನೆ ಎಂದು ಹೇಳಿದ್ದ. ಅದರಂತೆ ತಾಯಿ, ಪತ್ನಿ ನನ್ನ ಹಾಗೂ ಸಂಬಂಧಿಗಳ ಐದು ವೋಟರ್‌ ಐಡಿ ತೆಗೆದುಕೊಂಡು ಹಣ ಕೇಳಲು ಬಂದಿದ್ದೆ’ ಎಂದು ಮಜರ್‌ ಖಾನ್‌ ತಿಳಿಸಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬರ್ಖತ್‌ ಅಲಿ ಭಯ: “ಕೆಲ ವರ್ಷಗಳ ಹಿಂದೆ ನಡೆದ ದಿವಾನ್‌ ಅಲಿ ಕೊಲೆ ಪ್ರಕರಣದ ಆರೋಪಿ ಬರ್ಖತ್‌ ಅಲಿ ನನ್ನ ಮೇಲೂ ಹಲ್ಲೆ ನಡೆಸಿದ್ದ. ಹೀಗಾಗಿ ಮತ್ತೂಮ್ಮೆ ಆತ ಹಲ್ಲೆ ನಡೆಸುತ್ತಾನೆ ಎಂಬ ಭಯದಿಂದ ಲಾಂಗ್‌ ಇರಿಸಿಕೊಂಡಿದ್ದ. ಉಳಿದಂತೆ ಯಾವುದೇ ರೀತಿಯ ಉದ್ದೇಶವಿರಲಿಲ್ಲ’ ಎಂದು ಮಜರ್‌ ಖಾನ್‌ ವಿಚಾರಣೆ ವೇಳೆ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next