Advertisement

ನಾಲ್ವರು ದರೋಡೆಕೋರರ ಬಂಧನ

12:27 AM Apr 16, 2019 | Lakshmi GovindaRaju |

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಸಾರ್ವಜನಿಕರನ್ನು ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

Advertisement

ಚಂದ್ರಲೇಔಟ್‌ನ ನಿವಾಸಿಗಳಾದ ಅಬ್ದುಲ್‌ ಸುಲೇಮಾನ್‌(30), ಖಲಂದರ್‌(32), ಸಲೀಂ ಪಾಷಾ(29), ಅಬ್ದುಲ್‌ ಸಾಹೀಲ್‌(33) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಕಾರುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನದಿಂದ ಬ್ಯಾಟರಾಯನಪುರ, ಕೆಂಗೇರಿ, ಕೊಡಿಗೇಹಳ್ಳಿ, ಮದ್ದೂರು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ತಂಡ ಇತ್ತೀಚೆಗೆ ಜೆ.ಪಿ ನಗರ ನಿವಾಸಿ ರೇಗನ್‌ ಡ್ನೂಕೆ (38) ಎಂಬುವರ ಬಳಿ ದರೋಡೆ ಮಾಡಿತ್ತು. ಖಾಸಗಿ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ರೇಗನ್‌ ಡ್ನೂಕೆ, ಮಾ.23ರಂದು ಮೈಸೂರಿನಿಂದ ತಡರಾತ್ರಿ 12.30ರ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್‌ಗೆ ಬಂದಿದ್ದರು.

ಮನೆಗೆ ತೆರಳಲು ಬಾಡಿಗೆ ಕಾರಿಗಾಗಿ ಕಾಯುತ್ತಿದ್ದರು. ಅದೇ ವೇಳೆ ಕಾರಿನಲ್ಲಿ ಬಂದ ಆರೋಪಿಗಳು, ಡ್ರಾಪ್‌ಕೊಡುವ ನೆಪದಲ್ಲಿ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ, ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಉಂಗುರಗಳನ್ನು ಕಸಿದುಕೊಂಡಿದ್ದರು.

Advertisement

ನಂತರ ಕೆಂಗೇರಿ ಸಮೀಪದ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸುವಾಗ ರೇಗನ್‌ ಡ್ನೂಕೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ನಂತರ ಚಾಲಕನಿಗೆ ಕಾಲಿನಿಂದ ಒದ್ದು, ತಪ್ಪಿಸಿಕೊಂಡಿದ್ದರು. ಇದರಿಂದ ವಿಚಲಿತರಾದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಸಿಸಿ ಕ್ಯಾಮೆರಾ ಕೊಟ್ಟ ಸುಳಿವು: ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಬಳಸಿದ್ದ ಕಾರಿನ ನಂಬರ್‌ ಪತ್ತೆಯಾಗಿತ್ತು. ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ ನಾಯಂಡಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next