ಕೋಲಾರ: ನಗರದಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟವು 230ನೇ ದಿನಕ್ಕೆ ಕಾಲಿಟ್ಟಿದ್ದು, ಭಟ್ರಹಳ್ಳಿ ಗ್ರಾಮಸ್ಥರು ಧರಣಿಯನ್ನು ಮುಂದುವರಿಸಿದರು. ಗಣರಾಜ್ಯೋತ್ಸವದಂದು ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹಾಗೂ ಮಹಿಳಾ ಕಾಲೇಜನ್ನು ವಿಜಯಪುರ ವಿಶ್ವವಿದ್ಯಾಲಯಕ್ಕೆ ಸೇರಿಸಿರುವುದನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಬಿಡುಗಡೆಗೊಳಿಸಬೇಕಾಗಿತ್ತು.
ಆದರೆ ಅವರನ್ನು ಜೈಲಿಗೆ ಅಟ್ಟಿರುವುದು ಶಾಶ್ವತ ನೀರಾವರಿ ಹೋರಾಟವನ್ನು ದಮನಗೊಳಿಸುವ ಕುತಂತ್ರವಾಗಿದೆ. ಹೋರಾಟಗಾರರನ್ನು ಬಂಧಿಸುವುದಾದರೆ ಜಿಲ್ಲೆಯ ಎಲ್ಲಾ ಜನರು ಒಗ್ಗೂಡಿ ಜೈಲ್ ಭರೋ ಚಳವಳಿಯನ್ನು ಹಮ್ಮಿಕೊಂಡು ಬರಲಿದ್ದೇವೆ. ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳುಹಿಸಿ. ಜಿಲ್ಲೆಯ ನೀರಾವರಿ ಯೋಜನೆಗಳ ಹೆಸರಿನಲ್ಲಿ ತಿಂದು ತೇಗುವವರನ್ನು ಮೊದಲು ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು.
ಭಟ್ರಹಳ್ಳಿ ಗ್ರಾಮದ ಮುಖಂಡ ಬಿ.ವಿ. ರಾಜಣ್ಣ ಮಾತನಾಡಿ, ಜಿಲ್ಲೆಯ ಶಾಶ್ವತ ನೀರಿನ ಹೋರಾಟವನ್ನು ವಿರೋಧಿಸುವವರು ಮತ್ತು ಹಗುರವಾಗಿ ಮಾತನಾಡುವವರು ಈ ಜಿಲ್ಲೆಯ ದೊಡ್ಡ ಶತ್ರುಗಳು. ಉಸ್ತುವಾರಿ ಸಚಿವರು ಅಧಿಕಾರದಲ್ಲಿ ಇಲ್ಲದಿದ್ದಾಗ ಶಾಶ್ವತ ನೀರಿಗಾಗಿ ಆರ್ಭಟಿಸುತ್ತಿದ್ದರು. ಅಧಿಕಾರ ಬಂದ ನಂತರ ಶಾಶ್ವತ ನೀರಾವರಿಯನ್ನು ಮರೆತು ಬೆಂಗಳೂರಿನ ಕೊಳಚೆ ನೀರನ್ನು ತರಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ ಎಂದರು.
ಸಮರ್ಥನೆ ಕೊಡಿ: ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಮಾತನಾಡಿ, ಕೋಲಾರ ಜಿಲ್ಲೆಗೆ ಕೆ.ಸಿ. ವ್ಯಾಲಿ ನೀರನ್ನು ಯಾರಿಗಾಗಿ ತರಲಾಗುತ್ತಿದೆ ಎಂದು ಉಸ್ತುವಾರಿ ಸಚಿವರು ಮೊದಲು ಸಮರ್ಥನೆ ನೀಡಲಿ. ಕೊಳಚೆ ನೀರಿನಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವೆಂದು ಜನರಿಗೆ ಮನವರಿಕೆ ಮಾಡಲಿ. ಆ ನೀರನ್ನು ಪ್ರಾಣಿ ಪಕ್ಷಿಗಳು, ದನಕರುಗಳು ಕುಡಿಯಲು ಯೋಗ್ಯವೇ? ಕೆ.ಸಿ. ವ್ಯಾಲಿ ನೀರನ್ನು ಕುಡಿಯಲು, ವ್ಯವಸಾಯಕ್ಕೆ ಬಳಸಲು, ಇಲ್ಲವೇ ಅಂತರ್ಜಲ ಅಭಿವೃದ್ಧಿಗಾಗಿ ತರುತ್ತಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲಿ ಎಂದು ಸವಾಲು ಹಾಕಿದರು.
ಗ್ರಾಪಂ ಮಾಜಿ ಸದಸ್ಯ ಚಲಪತಿ ಮಾತನಾಡಿ, ಉಸ್ತುವಾರಿ ಸಚಿವರ ಮೇಲೆ ಜಿಲ್ಲೆಯ ಜನರು ಬಹಳ ವಿಶ್ವಾಸ, ನಂಬಿಕೆಯನ್ನು ಇಟ್ಟುಕೊಂಡಿದ್ದು, ಈ ಭಾಗದ ಶಾಶ್ವತ ನೀರಿನ ಸಮಸ್ಯೆಯನ್ನು ಬಗೆಹರಿಸುವರೆಂಬ ಆಶಾ ಭಾವನೆಯನ್ನು ಹೊಂದಿದ್ದಾರೆ. ಜನರ ಭಾವನೆಗಳಿಗೆ ತಕ್ಕಂತೆ ವರ್ತಿಸಬೇಕು. ಈ ಭಾಗದ ಸಂಘಟನೆಗಳು ಶಾಶ್ವತ ನೀರಿಗಾಗಿ ಆಗ್ರಹಿಸಿದರೆ ಜೈಲಿಗೆ ಅಟ್ಟುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಬಣ್ಣಿಸಿದರು.
ಗ್ರಾಮ ಪಂಚಾಯಿತಿಯ ಸದಸ್ಯರಾದ ಪಾರ್ವತಮ್ಮ ನಾರಾಯಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಮುನೇಗೌಡ, ಮುನಿಯಪ್ಪ, ರಮೇಶ್, ಆನಂದ್‌ಗೌಡ, ರವಿ, ಟೈಲರ್ ಬಾಬು, ಮಹೇಂದ್ರಬಾಬು, ಸುಧಾಕರ್, ಮಧು, ನಾಗರಾಜ, ಸುರೇಶ್, ಮಂಜು, ಬೈರೇಗೌಡ, ಅರುಣ್, ಮೂರ್ತಿ, ನವೀನ್, ಗಂಗಾಧರ್, ಮಂಜುನಾಥ್, ಚಲಪತಿ ಮುಂತಾದವರೊಂದಿಗೆ ಸಮಿತಿಯ ಸಂಚಾಲಕರಾದ ಕುರುಬರಪೇಟೆ ವೆಂಕಟೇಶ್, ವಿ.ಕೆ. ರಾಜೇಶ್, ಶ್ರೀನಿವಾಸ್, ಅಹಿಂದ ಮಂಜುನಾಥ್, ರವೀಂದ್ರ, ಕನ್ನಡ ಪ್ರಕಾಶ್, ಡಾ.ರಮೇಶ್, ಗಲ್‌ಪೇಟೆ ಪ್ರಕಾಶ್ ಉಪಸ್ಥಿತರಿದ್ದರು.