ಬೆಂಗಳೂರು: ತಮಿಳುನಾಡು ಮತ್ತು ಆಂಧ್ರಪ್ರದೇಶದ ಅರಣ್ಯಪ್ರದೇಶಗಳಲ್ಲಿ ಕಳವು ಮಾಡಿ ತಂದ ರಕ್ತ ಚಂದನ ಮರದ ತುಂಡುಗಳನ್ನು ಮುಂಬೈ, ಚೆನ್ನೈ ಸೇರಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಯ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬೇಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತ ಜಿಲ್ಲೆಯ ಹೊಸಕೋಟೆ ತಾಲೂಕಿನ ಶೇಖ್ ಅನೀಸ್(41) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಹಮ್ಮದ್ ಇಕ್ಬಾಲ್(40) ಬಂಧಿತರು. ಪ್ರಮುಖ ಆರೋಪಿ ಅಲಿ ಎಂಬಾತನ ಪತ್ತೆ ಕಾರ್ಯ ಮುಂದುವರಿದಿದೆ. ಅವರಿಂದ 60 ಲಕ್ಷ ರೂ. ಮೌಲ್ಯದ ಎರಡು ಟನ್‌ಗಳಷ್ಟು ರಕ್ತಚಂದನ ಮರದ ತುಂಡುಗಳು, ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು ಈ ಹಿಂದೆ ಇದೇ ಮಾದರಿಯಲ್ಲಿ ರಕ್ತ ಚಂದನವನ್ನು ವಿದೇಶಕ್ಕೆ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದ ತಂಡದ ಪ್ರಮುಖ ಸದಸ್ಯ ಪತ್ತೂರಿನ ಅಬ್ದುಲ್ ರಶೀದ್ ಅಲಿಯಾಸ್ ಪುತ್ತು ಬಾಯರ್ ಜತೆ ಸಂಪರ್ಕ ಹೊಂದಿರುವ ಸಾಧ್ಯತೆಯಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಶೇಖ್ ಅನೀಸ್ ತಮಿಳುನಾಡಿನ ಅರಣ್ಯ ಪ್ರದೇಶ ಹಾಗೂ ಪ್ರಮುಖ ವ್ಯಕ್ತಿಗಳ ಮನೆಗಳ ಆವರಣದಲ್ಲಿ ಬೆಳೆದಿದ್ದ ರಕ್ತಚಂದನ ಮರಗಳನ್ನು ಕಡಿಸಿ ಅವುಗಳನ್ನು ನಿರ್ದಿಷ್ಟ ತೂಕದ ತಂಡುಗಳನ್ನಾಗಿ ಮಾಡಿ ಕಾರುಗಳ ಮೂಲಕ ವಿದ್ಯಾರಣ್ಯಪುರದಲ್ಲಿ ಗೋದಾಮಿಗಳಿಗೆ ಕಾರುಗಳ ಮೂಲಕ ತರುತ್ತಿದ್ದ. ಈ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಜು. 28ರಂದೇ ಮಾಲು ಸಮೇತ ಬಂಧಿಸಲಾಗಿತ್ತು.
ಈ ವೇಳೆ ಆತನಿಂದ 471 ಕೆ.ಜಿ. ರಕ್ತಚಂದನ ಮರದ ತುಂಡುಗಳು ವಶಕ್ಕೆ ಪಡೆಯಲಾಗಿದೆ. ಶೇಖ್ ಅನೀಸ್‌ನ ಮಾಹಿತಿ ಮೇರೆಗೆ ವಿದ್ಯಾರಣ್ಯಪುರಲ್ಲಿದ್ದ ಎರಡು ಗೋದಾವುಗಳ ಮೇಲೆ ದಾಳಿ ನಡೆಸಿ ಮೊಹಮದ್ ಇಕ್ಬಾಲ್‌ನನ್ನು ಬಂಧಿಸಲಾಗಿದೆ. ಈ ವೇಳೆ ಎರಡು ಗೋದಾವುಗಳಲ್ಲಿದ್ದ 1544 ಕೆ.ಜಿ ತೂಕದ ರಕ್ತಚಂದನ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಆರೋಪಿಗಳು ರಕ್ತಚಂದನ ಮರದ ತುಂಡುಗಳನ್ನು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಾಡುಗಳಲ್ಲಿ ಕಳ್ಳತನ ಮಾಡಿ ಅವುಗಳನ್ನು ಅಕ್ರಮವಾಗಿ ಚೆನ್ನೈ, ಮುಂಬೈ, ಕೇರಳ ಸೇರಿ ಕೆಲ ರಾಜ್ಯಗಳು ಹಾಗೂ ವಿದೇಶಗಳಿಗೂ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.