ಬೆಂಗಳೂರು: ಕಳೆದ ಒಂದು ವರ್ಷದಿಂದ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹೋಟೆಲ್‌ನಲ್ಲಿ ಊಟ ಮಾಡಿ ಬಿಲ್ ನೀಡದೆ ಹೆದರಿಸುತ್ತಿದ್ದ ಬೊಮ್ಮನಹಳ್ಳಿಯ ಕಾರ್ತಿಕ್(40) ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿ ಎಂದು ನಕಲಿ ಕಾರ್ಡ್ ತೋರಿಸಿ ಊಟ ಮಾಡಿ ಬಿಲ್ ನೀಡದೇ ಹೆದರಿಸುತ್ತಿದ್ದ. ಈ ಬಗ್ಗೆ ಕೇಳಿದರೆ ಹಲ್ಲೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಡಿವಾಳದ ಮಾರುತಿ ನಗರದಲ್ಲಿರುವ ಶರವಣ ಭವನ್ ಹೋಟೆಲ್ ಮಾಲೀಕ ಕಾಳರಾಜು ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಆರೋಪಿ ಕಾರ್ತಿಕ್ ಮೇಲೆ ಅನುಮಾನ ಬಂದಿದ್ದರಿಂದ ಕಾಳರಾಜು ಮಡಿವಾಳ ಗಸ್ತುಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕಾರ್ತಿಕ್ ಎಂಬ ಪೊಲೀಸ್ ಅಧಿಕಾರಿ ಯಾರೂ ಇಲ್ಲ. ಯಾರೋ ಸುಳ್ಳು ಹೇಳಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಗಸ್ತಿನಲ್ಲಿದ್ದ ಪೊಲೀಸರು ತಿಳಿಸಿದ್ದರು.
ಜೂ.21ರಂದು ಕಾರ್ತಿಕೇಯನ್ ಹೋಟೆಲ್‌ಗೆ ಬಂದು ಎಂದಿನಂತೆ ಸಿಬ್ಬಂದಿಗೆ ಬೆದರಿಸಿ ಊಟ ಮಾಡಿ, ಎಗ್ ರೈಸ್ ಪಾರ್ಸೆಲ್ ಮಾಡಲು ಸೂಚಿಸಿದ್ದ. ಆಗ ಮಾಲೀಕ ಕಾಳರಾಜು ನೀನು ನಕಲಿ ಪೊಲೀಸ್ ಎಂಬುದು ಗೊತ್ತಿದೆ. ಬಿಲ್ ಕೊಡು ಎಂದಿದ್ದರು. ಪೊಲೀಸ್ ಸಿಬ್ಬಂದಿ ಕರೆ ತಂದು ಹೋಟೆಲ್ ಮುಚ್ಚಿಸುತ್ತೇನೆ ಎಂದು ಹೇಳಿ ಹೋಟೆಲ್ ಸಿಬ್ಬಂದಿ ವಾಸು ಎಂಬಾತನ ಮೇಲೆ ಹಲ್ಲೆ ನಡೆಸಿ ತೆರಳಿದ್ದ.
ಅಲ್ಲದೆ, ಜೂ.22ರಂದು ಮತ್ತೆ ಹೋಟೆಲ್‌ಗೆ ಬಂದ ಕಾರ್ತಿಕ್ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಇದರಿಂದ ಬೇಸತ್ತ ಕಾಳರಾಜು ಮಡಿವಾಳ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಮೂಲಕ ಮುಖದ ಚಹರೆ ಪತ್ತೆ ಹಚ್ಚಿ ಮಡಿವಾಳದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.