ಚಿಕ್ಕಬಳ್ಳಾಪುರ: ಜಿಲ್ಲಾಡಳಿತದ ಅನುಮತಿಯಿಲ್ಲದೇ ನಡೆಯುವ ಸಭೆ, ಸಮಾರಂಭಗಳ ವಿರುದ್ಧ ಎಂಸಿಸಿ ತಂಡಗಳ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಉಪ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸೆಕ್ಟರ್ ಅಧಿಕಾರಿಗಳು, ಕ್ಷಿಪ್ರ ಪಡೆ ಅಧಿಕಾರಿಗಳು ಹಾಗೂ ವಿಡಿಯೋ ಪರಿವೀಕ್ಷಣಾ ತಂಡ ಹಾಗೂ ಚೆಕ್‌ಪೋಸ್ಟ್ ಅಧಿಕಾರಿಗಳು ಪ್ರತಿಯೊಂದು ವಾಹನವನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕೆಂದು ಎಂಸಿಸಿ ನೋಡಲ್ ಅಧಿಕಾರಿ ಹಾಗೂ ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಂಡದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನುಮಾನಸ್ಪಾದವಾಗಿ ಕಂಡು ಬರುವ ವ್ಯಕ್ತಿಗಳು ಹಾಗೂ ಮನೆಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಬೇಕೆಂದು ಸೂಚಿಸಿದರು.
ಪರಿಶೀಲನೆ ನಡೆಸಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಮಾದರಿ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯು ಎಚ್ಚರಿಕೆಯಿಂದ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪರಿಶೀಲನೆ ಸಮಯದಲ್ಲಿ ನಗದು, ಮದ್ಯ, ಮಾದಕ ವಸ್ತುಗಳು ಮತ್ತಿತರ ವಸ್ತುಗಳು ಕಂಡು ಬಂದಲ್ಲಿ ದಾಖಲೆಗಳ ಸಮೇತವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ವಿಡಿಯೋ ಚಿತ್ರೀಕರಿಸಿ: ಬಸ್, ಕಾರ್ ಮತ್ತಿತರ ನಾಲ್ಕು ಚಕ್ರ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸದೆ ಬಿಡುವಂತಿಲ್ಲ. ಸಭೆ, ಸಮಾರಂಭ, ರ್ಯಾಲಿಗಳಲ್ಲಿ ಭಾಗವಹಿಸುವ ರಾಜಕೀಯ ಪಕ್ಷಗಳ ನಾಯಕರ ಭಾಷಣದ ಕುರಿತು ವಿಡಿಯೋವನ್ನು ಕಡ್ಡಾಯವಾಗಿ ಚಿತ್ರೀಕರಿಸಬೇಕು. ಚಿತ್ರೀಕರಿಸಿದ ವಿಡಿಯೋ ತುಣುಕುಗಳನ್ನು ಪರಿವೀಕ್ಷಣಾ ತಂಡದ ಅಧಿಕಾರಿಗಳು ವೀಕ್ಷಿಸಬೇಕು ಎಂದು ತಾಕೀತು ಮಾಡಿದರು.
ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಮಾತನಾಡಿ, ಉಪ ಚುನಾವಣೆಯು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಲು ಎಲ್ಲಾ ಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಮತದಾನದ ದಿನ ಮತಗಟ್ಟೆ ಕೇಂದ್ರಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸೆಕ್ಟರ್ ಅಧಿಕಾರಿಗಳು ನಿಗಾ ವಹಿಸಬೇಕು. ಶಾಂತಿಯುತ ಮತದಾನಕ್ಕೆ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಜಿಲ್ಲಾದ್ಯಂತ ಜಾರಿಯಾಗಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯ. ಎಲ್ಲಾ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದರು. ವಿಶೇಷ ಕಾರ್ಯಾಗಾರದಲ್ಲಿ ಚಿಂತಾಮಣಿಯ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಕಾರ್ಯಕ್ರಮದಲ್ಲಿ ಎಂಸಿಸಿ ತಂಡದ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾ ಅಧಿಕಾರಿ ಡಾ.ಅಶೋಕ್, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.