Advertisement

ಚುನಾವಣಾ ಆಯುಕ್ತರ ನೇಮಕಕ್ಕೆ “ಕೊಲಿಜಿಯಂ’ವ್ಯವಸ್ಥೆ ಅಗತ್ಯ

11:42 AM Mar 19, 2018 | |

ಬೆಂಗಳೂರು: ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇರವಾಗಿ ಕೇಂದ್ರ ಸರ್ಕಾರ ನೇಮಕ ಮಾಡುವ ಬದಲು “ಕೊಲಿಜಿಯಂ’ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಪ್ರತಿಪಾದಿಸಿದ್ದಾರೆ. 

Advertisement

ಫೋರಂ ಫಾರ್‌ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್‌ ಅಮಿಟಿ-ಕರ್ನಾಟಕ (ಎಫ್ಡಿಸಿಎ) ಹಾಗೂ ಸೇಂಟ್‌ ಜೋಸೆಫ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಚುನಾವಣಾ ಸುಧಾರಣೆಗಳು ಮತ್ತು ಸಾಂವಿಧಾನಿಕ ಮಾದರಿಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದ ಆವರು, ವಿಶ್ವದ ಅತ್ಯಂತ ಬಲಿಷ್ಠ ಚುನಾವಣಾ ಆಯೋಗದ ನಮ್ಮದು. ಆದರೆ, ಅತ್ಯಂತ ದುರ್ಬಲ ನೇಮಕಾತಿ ವ್ಯವಸ್ಥೆ ಅದು ಹೊಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಮೂರ್ತಿಗಳ ನೇಮಕಾತಿಗೆ ಕೊಲಿಜಿಯಂ ಇದೆ. ಅದೇ ರೀತಿ ಸಾಂವಿಧಾನಿಕ ಸಂಸ್ಥೆ ಅಲ್ಲದಿದ್ದರೂ ಕೇಂದ್ರ ಮುಖ್ಯ ಮಾಹಿತಿ ಆಯುಕ್ತರು, ಕೇಂದ್ರ ವಿಚಕ್ಷಣಾ ಆಯುಕ್ತರ ನೇಮಕಾತಿಗೆ ಸ್ವತಂತ್ರ ಸಮಿತಿ ಇರುತ್ತದೆ. ಕೇಂದ್ರ ಗೃಹ ಸಚಿವಾಲಯದ ಒಂದು ವಿಭಾಗವಾಗಿರುವ ಸಿಬಿಐ ಮುಖ್ಯಸ್ಥರ ನೇಮಕಾತಿಗೆ ಪ್ರಧಾನಿ ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಸಮಿತಿ ಇರುತ್ತದೆ.

ಆದರೆ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾತ್ರ ನೇರವಾಗಿ ಸರ್ಕಾರ ಮಾಡುತ್ತದೆ. ನಾನೂ ಸಹ ಇದೇ ದುರ್ಬಲ ವ್ಯವಸ್ಥೆಯ ಫ‌ಲಾನುಭವಿ. ಈ ರೀತಿಯ ಸರ್ಕಾರದ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ರಾಷ್ಟ್ರದ ಹಿತ ಮತ್ತು ಚುನಾವಣಾ ಆಯೋಗ ಎಂಬ ಸಾಂವಿಧಾನಿಕ ಸಂಸ್ಥೆಯ ರಕ್ಷಣೆಗೆ ಇದು ಅವಶ್ಯಕ ಎಂದು ಹೇಳಿದರು. 

ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಚುನಾವಣೆಗಳಲ್ಲಿ “ಹಣ ಬಲಕ್ಕೆ’ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ರಾಜಕೀಯ ಪಕ್ಷಗಳನ್ನು ನೋಂದಣಿ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಆದರೆ, ನೋಂದಣಿ ರದ್ದುಪಡಿಸುವ ಅಧಿಕಾರವಿಲ್ಲ. ರಾಜಕೀಯ ಪಕ್ಷಗಳ ನೋಂದಣಿ ರದ್ದುಪಡಿಸುವ ಅಧಿಕಾರ ಆಯೋಗಕ್ಕೆ ಬೇಕು ಎಂಬ 20 ವರ್ಷಗಳ ಬೇಡಿಕೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

Advertisement

ಮತದಾರ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಆಯೋಗ ಯಶಸ್ವಿಯಾಗಿದೆ. ಆದರೆ, ಚುನಾವಣಾ ಸುಧಾರಣೆ ಬಗ್ಗೆ ಯಥೇತ್ಛವಾಗಿ ಮಾತನಾಡುವ “”ನಗರ ಪ್ರದೇಶದ ವಿದ್ಯಾವಂತ ಮತದಾರರ’ ನಿರಾಸಕ್ತಿ ಇನ್ನೂ ನಮ್ಮನ್ನು ಕಾಡುತ್ತಿದೆ. “ಕಾಸಿಗಾಗಿ ಸುದ್ದಿ’ (ಪೇಡ್‌ ನ್ಯೂಸ್‌) ಪ್ರಕರಣಗಳನ್ನು ದೃಢಪಡಿಸಲು ನಮ್ಮಿಂದ ಆಗುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆಗಳು ನಡೆದು, ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಸಂವಿಧಾನದ ಸರ್ವಕಾಲಿಕ ಶ್ರೇಷ್ಠ ಮಾದರಿಗಳಾದ ಪ್ರಜಾಪ್ರಭುತ್ವ, ಸಮಾನತೆ, ಜಾತ್ಯಾತೀತತೆ, ಬಹುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಚುನಾವಣಾ ಪ್ರಕ್ರಿಯೆ ಮೂಲಕ ಚುನಾವಣಾ ಆಯೋಗ ಕಾರ್ಯರೂಪಕ್ಕೆ ತರುತ್ತಿದೆ. ಕಾಲಬದ್ಧ ಚುನಾವಣೆ ಪ್ರಜಾಪ್ರಭುತ್ವದ ಜೀವಾಳ. ಕಳೆದ 60 ದಶಕಗಳಲ್ಲಿ ಚುನಾವಣಾ ಆಯೋಗದ ಕಾರಣಕ್ಕೆ ಚುನಾವಣೆ ರದ್ದಾದ ಅಥವಾ ಮುಂದೂಡಲ್ಪಟ್ಟ ಉದಾಹರಣೆ ಇಲ್ಲ.

ಅಮೇರಿಕಾ ಮತ್ತು ಇಂಗ್ಲೆಂಡ್‌ನ‌ಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಗಲು ನೂರು ವರ್ಷ ಬೇಕಾಯಿತು. ಆದರೆ, ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೇ ಸಮಾನ ಮತದಾನದ ಹಕ್ಕು ಕೊಡಲಾಗಿದೆ. ಚುನಾವಣಾ ಆಯೋಗಕ್ಕೆ ನಿಜವಾದ ಅರ್ಥದಲ್ಲಿ ಶಕ್ತಿ ಕೊಟ್ಟಿದ್ದು ಸುಪ್ರೀಂಕೋರ್ಟ್‌.

ಎಲ್ಲ ಹಂತಗಳಲ್ಲೂ ಸುಪ್ರೀಂಕೋರ್ಟ್‌ ಆಯೋಗಕ್ಕೆ ಬೆಂಬಲ ನೀಡಿದ್ದರಿಂದ ಸಕಾಲಿಕ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಸಾಧ್ಯವಾಗಿದೆ. ಈಗ ಆಯೋಗದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತಂತೆಯೂ ಸುಪ್ರೀಂಕೋರ್ಟ್‌ನಲ್ಲೇ ನಮಗೆ ನ್ಯಾಯ ಮತ್ತು ಶಕ್ತಿ ಸಿಗುವ ವಿಶ್ವಾಸವಿದೆ  ಎಂದು ಅಭಿಪ್ರಾಯಪಟ್ಟರು. 

ವಿಚಾರಸಂಕಿರಣದ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ವಹಿಸಿದ್ದರು. ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ಅಸೋಸಿಯೇಷನ್‌ ಡೆಮಾಕ್ರಟಿಕ್‌ ರಿಫಾಮ್ಸ್‌ì ಸಂಸ್ಥೆಯ ಸಂಸ್ಥಾಪಕ ಟ್ರಸ್ಟೀ ಪ್ರೊ. ತ್ರಿಲೋಚನ‌ಶಾಸ್ತ್ರೀ, ಭಾರತದಲ್ಲಿ ಚುನಾವಣಾ ಸುಧಾರಣಾ ಅಭಿಯಾನ (ಸಿಇಆರ್‌ಐ) ಸಂಸ್ಥಾಪಕಿ ಜ್ಯೋತಿರಾಜ್‌, ಸೇಂಟ್‌ ಜೋಸೇಫ್ ಕಾಲೇಜಿನ ಪ್ರಾಧ್ಯಾಪಕ ಫಾದರ್‌ ಅಗಸ್ಟೈನ್‌ ವಿಷಯ ಮಂಡಿಸಿದರು. ಎಫ್ಡಿಸಿಎ ಪ್ರಧಾನ ಕಾರ್ಯದರ್ಶಿ ಎಂ.ಎಫ್. ಪಾಷಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next