Advertisement

ಅಸಹಜ ಸಂಗತಿಗಳ ರೂಪ ದರ್ಶನ

09:57 AM Nov 25, 2019 | Lakshmi GovindaRaj |

ಅದೊಂದು ಐವರ ತಂಡ. ತಮ್ಮದೇ ಆದ ಜಗತ್ತಿನಲ್ಲಿ ಒಂದೊಂದು ಜಂಜಾಟದಲ್ಲಿರುವ ಈ ಸ್ನೇಹಿತರು ಅದೆಷ್ಟೋ ವರ್ಷಗಳ ನಂತರ ಜೊತೆಯಾಗಿ, ಒಂದು ದಟ್ಟ ಕಾನನದೊಳಗೆ ನಿಗೂಢವಾಗಿರುವ ಕರಡಿ ಗುಹೆಗೆ ಪ್ರಯಾಣ ಬೆಳೆಸುತ್ತಾರೆ. ಸ್ನೇಹಿತರ ಈ ಪ್ರಯಾಣ ಹೇಗಿರುತ್ತದೆ? ಈ ಪ್ರಯಾಣದಲ್ಲಿ ಎದುರಾಗುವ ಸವಾಲುಗಳೇನು? ಅದೆಲ್ಲವನ್ನು ದಾಟಿ ಈ ಸ್ನೇಹಿತರು ಕರಡಿ ಗುಹೆ ಸೇರುತ್ತಾರಾ? ಎಂಬ ಅಂಶಗಳ ಸುತ್ತ ಸಾಗುವ ಚಿತ್ರವೇ “ಮನರೂಪ’.

Advertisement

ಚಿತ್ರದ ಹೆಸರೇ ಹೇಳುವಂತೆ “ಮನರೂಪ’ ಮನಸ್ಸಿನ ವಿವಿಧ ರೂಪಗಳನ್ನು ಕುರಿತು ಮಾಡಿರುವ ಚಿತ್ರ. ಇಲ್ಲಿ ಸ್ನೇಹಿತರು, ಪ್ರಯಾಣ, ಕಾಡು, ಕರಡಿ ಗುಹೆ, ಗುಮ್ಮ ಎಲ್ಲವೂ ಸಾಂಕೇತಿಕ ಪ್ರತಿಬಿಂಬ. ಇದೆಲ್ಲವನ್ನು ಇಟ್ಟುಕೊಂಡು ಹಿನ್ನೆಲೆಯಾಗಿಟ್ಟುಕೊಂಡು, ಇಂದಿನ ಆಧುನಿಕ ಜಗತ್ತು ಮತ್ತು ತಂತ್ರಜ್ಞಾನ ಮನುಷ್ಯನ ಮನಸ್ಸನ್ನು ಎಷ್ಟರ ಮಟ್ಟಿಗೆ ವಿಕೃತಗೊಳಿಸಬಹುದು. ವಿಕ್ಷಿಪ್ತ ಮನಸ್ಸುಗಳ ಪರಕಾಷ್ಠೆ ಯಾವ ಹಂತಕ್ಕೆ ಹೋಗಬಹುದು.

ವಿಕೃತ ಮನಸ್ಸುಗಳ ಕುಕೃತ್ಯಕ್ಕೆ ಯಾರೆಲ್ಲ ಬಲಿಯಾಗಬಹುದು, ಹೇಗೆಲ್ಲ ಬಲಿಯಾಗಬಹುದು ಎನ್ನುವ ಅನೇಕ ಅನಿರೀಕ್ಷಿತ ಮತ್ತು ಅಸಹಜ ಸಂಗತಿಗಳ ಸುತ್ತ “ಮನರೂಪ’ ಚಿತ್ರ ಸಾಗುತ್ತದೆ. ಸೈಕಲಾಜಿಕಲ್‌ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಬಂದಿರುವ “ಮನರೂಪ’ ತಲೆಗೆ ಹೆಚ್ಚು ಕೆಲಸ ಕೊಟ್ಟು, ತರ್ಕಕ್ಕೆ ತಳ್ಳುವುದರಿಂದ ಮನಸ್ಸಿಗೆ ಮುಟ್ಟುವುದು ಕಡಿಮೆ. ಚಿತ್ರದ ಕಥಾಹಂದರ ಚೆನ್ನಾಗಿದ್ದರೂ, ಮನರಂಜನಾತ್ಮಕವಾಗಿ ಪ್ರೇಕ್ಷಕರಿಗೆ ತಕ್ಷಣಕ್ಕೆ ಚಿತ್ರ ಅರ್ಥವಾಗೋದು ಕಷ್ಟ.

ಮೊದಲರ್ಧ ಮತ್ತು ದ್ವಿತೀಯಾರ್ಧದ ಹಲವೆಡೆ ಮಂದವಾಗಿ ಸಾಗುವ “ಮನರೂಪ’ ಕ್ಲೈಮ್ಯಾಕ್ಸ್‌ ವೇಳೆಗೆ ತುಸು ವೇಗ ಪಡೆದುಕೊಳ್ಳುತ್ತದೆ. ಚಿತ್ರದ ನಿರೂಪಣೆಯ ವೇಗವನ್ನು ಇನ್ನಷ್ಟು ತರ್ಕಬದ್ಧವಾಗಿ ಹೆಚ್ಚಿಸಿದ್ದರೆ, “ಮನರೂಪ’ ಮತ್ತಷ್ಟು ಪರಿಣಾಮಕಾರಿಯಾಗಿ ಮನ ಮುಟ್ಟುವ ಸಾಧ್ಯತೆಗಳಿದ್ದವು. ಉಳಿದಂತೆ ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಟಿಯರಾದ ಅನೂಷಾ ರಾವ್‌, ನಿಶಾ, ಅಮೋಘ ಸಿದ್ಧಾರ್ಥ್ ಅಭಿನಯ ಗಮನ ಸೆಳೆಯುತ್ತದೆ. ಇನ್ನುಳಿದ ಕಲಾವಿದರ ಅಭಿನಯ ಪರವಾಗಿಲ್ಲ ಎನ್ನಬಹುದಷ್ಟೆ.

ಇನ್ನು “ಮನರೂಪ’ ಚಿತ್ರದ ತಾಂತ್ರಿಕ ಕಾರ್ಯಗಳು ಚೆನ್ನಾಗಿವೆ. ಸುಂದರ ಲೊಕೇಶನ್‌ಗಳು, ಹಸಿರು, ಕಾಡು, ನದಿ, ಜಲಪಾತಗಳು ತೆರೆಮೇಲೆ ಚಿತ್ರದ ಅಂದ ಹೆಚ್ಚಿಸಿದೆ. ಚಿತ್ರದ ಛಾಯಾಗ್ರಹಣ ಕಾರ್ಯ ಅಚ್ಚುಕಟ್ಟಾಗಿದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ, ಚೆನ್ನಾಗಿರುತ್ತಿತ್ತು. ಅಲ್ಲಲ್ಲಿ ಲೈಟಿಂಗ್‌ ಮತ್ತು ಸೌಂಡಿಂಗ್‌ ಕೊರತೆ ಕಾಣುತ್ತದೆ. ಹಿನ್ನೆಲೆ ಸಂಗೀತದ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ ಕೊಂಚ ಗಂಭೀರವಾಗಿ ಒಂದು ಸಸ್ಪೆನ್ಸ್‌-ಥ್ರಿಲ್ಲರ್‌ ಅನುಭವವನ್ನು ತೆಗೆದುಕೊಳ್ಳಬೇಕು ಎನ್ನುವವರು ಒಮ್ಮೆ “ಮನರೂಪ’ ನೋಡಲು ಅಡ್ಡಿಯಿಲ್ಲ.

Advertisement

ಚಿತ್ರ: ಮನರೂಪ
ನಿರ್ಮಾಣ: ಸಿಎಂಸಿಆರ್‌ ಮೂವೀಸ್‌
ನಿರ್ದೇಶನ: ಕಿರಣ್‌ ಹೆಗಡೆ
ತಾರಾಗಣ: ದಿಲೀಪ್‌ ಕುಮಾರ್‌, ಅನೂಷಾ ರಾವ್‌, ನಿಶಾ ಬಿ.ಆರ್‌, ಆರ್ಯನ್‌, ಅಮೋಘ ಸಿದ್ಧಾರ್ಥ್, ಗಜಾ ನೀನಾಸಂ, ಬಿ. ಸುರೇಶ್‌ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next