ಪಳ್ಳಿ: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈದಾಳ್ ಪರಂಬರೊಟ್ಟು ಸಂಪರ್ಕ ಕಲ್ಪಿಸುವ ಕಾಲುಸಂಕ ತೀರಾ ಹಳೆಯದಾಗಿದ್ದು ಸುಮಾರು 70 ವರ್ಷಗಳಷ್ಟು ಹಿಂದಿನದ್ದಾಗಿದೆ.
ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಂಬರೊಟ್ಟು ಬೈದಾಳ್ ಸಂಪರ್ಕಿಸುವ ಕಾಲುಸಂಕವನ್ನು ಅಭಿವೃದ್ಧಿಗೊಳಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಮಾತ್ರ ಏನೂ ಪ್ರಯೋಜನವಾಗಿಲ್ಲ.
ಈ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು ಬಹುತೇಕ ಎಲ್ಲ ಮನೆಯ ನಿವಾಸಿಗಳು ದಿನ ನಿತ್ಯ ಈ ಕಾಲುಸಂಕದ ಮೂಲಕವೆ ತಮ್ಮ ದೈನಂದಿನ ಕೆಲಸಗಳಿಗೆ ಸಂಚರಿಸುತ್ತಿದ್ದಾರೆ. ಬಹುತೇಕರು ಕೃಷಿ ಅವಲಂಬಿಸಿದ್ದು ತಾವು ಬೆಳೆದ ತರಕಾರಿಗಳನ್ನು ಮಾರುಕಟ್ಟೆ ಕೊಂಡೊಯ್ಯಲು ಈ ಮಾರ್ಗವನ್ನೇ ಅವಲಂಬಿಸಿದ್ದು ಹಾಗೂ ಹೈನುಗಾರರು ಹಾಲಿನ ಡೈರಿಗೆ ಸಂಚರಿಸಲು ಈ ಕಾಲುಸಂಕದ ಮೂಲಕವೇ ತೆರಳಬೇಕಾಗಿದೆ.
ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಇತರೆಡೆ ವ್ಯಾಸಂಗಕ್ಕಾಗಿ ತೆರಳಲು ಕಾಲುಸಂಕವನ್ನೇ ಅವಲಂಬಿಸಿದ್ದಾರೆ.ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಾಲುಸಂಕವು ಪೋಷಕರು ಈ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ತೆರಳುವುದು ಕಷ್ಟ ಸಾಧ್ಯವಾಗಿದೆ. ಎರಡು ಪಾರ್ಶ್ವಗಳಲ್ಲಿಯೂ ರಸ್ತೆಗಳಿದ್ದೂ ಕಾಲುಸಂಕದಿಂದಾಗಿ ವಾಹನ ಸಂಚಾರ ಅಸಾಧ್ಯ.
ಇಲ್ಲಿ ಕಿರುಸೇತುವೆ ನಿರ್ಮಿಸುವಂತೆ ಹಲವಾರು ಗ್ರಾಮ ಸಭೆಗಳಲ್ಲಿಯೂ ಪ್ರಸ್ತಾಪಗೊಂಡರೂ ಮಾತ್ರ ಸ್ಥಳೀಯರ ಬಹು ದಿನಗಳ ಬೇಡಿಕೆ ಮಾತ್ರ ಇನ್ನೂ ನೆರವೇರಿಲ್ಲ. ಪ್ರತೀ ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ಭರವಸೆ ನೀಡುತ್ತಿದ್ದರೂ ಕಿರು ಸೇತುವೆ ನಿರ್ಮಿಸುವಲ್ಲಿ ಮಾತ್ರ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮುಂದಿನ ಮಳೆಗಾಲದ ಒಳಗಾದರೂ ಸಂಬಂಧಪಟ್ಟ ಅಧಿಕಾರಿಗಳು ಕಿರು ಸೇತುವೆ ನಿರ್ಮಿಸುವಲ್ಲಿ ಕ್ರಮ ಕೈಗೊಂಡಲ್ಲಿ ಗ್ರಾಮಸ್ಥರ ಬಹುದಿನಗಳ ಕನಸು ನನಸಾಗಬಹುದಾಗಿದೆ.
ಪ್ರಯತ್ನಿಸಲಾಗುವುದು
ಈ ಕಾಮಗಾರಿ ಕುರಿತು ಮುಂದಿನ ಕ್ರಿಯಾ ಯೋಜನೆಯ ಪಟ್ಟಿಯಲ್ಲಿ ಸೇರಿಸಿ ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನಿಸಲಾಗುವುದು.
-ಗೋಪಾಲ ಶೆಟ್ಟಿ,
ಗ್ರಾ.ಪಂ. ಉಪಾಧ್ಯಕ್ಷರು
ಕಿರು ಸೇತುವೆ ಬೇಕು
ಅತೀ ಹಳೆಯದಾದ ಕಾಲುಸಂಕದಲ್ಲಿ ಬಹುತೇಕ ಶಾಲಾ ಮಕ್ಕಳು ದಿನ ನಿತ್ಯ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಇಲ್ಲಿನ ಹಳ್ಳ ತುಂಬಿ ಹರಿಯುತ್ತದೆ. ಈ ನಿಟ್ಟಿನಲ್ಲಿ ಕಿರು ಸೇತುವೆ ನಿರ್ಮಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಬೇಕು.
-ಶ್ವೇತಾ ಶೆಟ್ಟಿಗಾರ್,
ಪರಂಬರೊಟ್ಟು ನಿವಾಸಿ