Advertisement

ಆರ್ಥಿಕ ವಹಿವಾಟಿಗೆ ಶಾಶ್ವತ ಹೊಡೆತದ ಆತಂಕ

09:12 PM Aug 28, 2021 | Team Udayavani |

ಕುಂದಾಪುರ: ಜನರ ಪರವಾಗಿ ಕಾಳಜಿ ವಹಿಸಬೇಕಾದ ಹೆದ್ದಾರಿ ಇಲಾಖೆಯು ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಕುಂದಾಪುರ ನಗರಕ್ಕೆ ಹೆದ್ದಾರಿಯಿಂದ ಪ್ರವೇಶ ಕಲ್ಪಿಸುವ ಪ್ರಸ್ತಾವ ವನ್ನು ಕೈ ಚೆಲ್ಲುವ ಮೂಲಕ ಉದ್ಧಟತನ ಮೆರೆದಿದ್ದು, ಈ ಬಗ್ಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ಇದರಿಂದಾಗಿ ನಗರಕ್ಕೆ ಬರುವ ಸಾರ್ವಜನಿಕರಿಗೆ ಮಾತ್ರವಲ್ಲದೆ ನಗರದ ವ್ಯಾಪಾರ- ವಹಿವಾಟಿಗೆ ಶಾಶ್ವತ ಹೊಡೆತ ಬೀಳುವ ಆತಂಕ ಎದುರಾಗಿದೆ.

Advertisement

ಉಡುಪಿ ಕಡೆಯಿಂದ ಕುಂದಾಪುರ ನಗರಕ್ಕೆ ಬರಬೇಕಾದರೆ ಹಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಅದರ ಹೊರತಾಗಿ ಅಂಡರ್‌ಪಾಸ್‌, ಫ್ಲೈಓವರ್ ಮೇಲೇರಿದರೆ ಎಪಿಎಂಸಿ ಬಳಿ ಇಳಿಯಬೇಕು. ಅದಕ್ಕಾಗಿ ನಂದಿನಿ ಸ್ಟಾಲ್‌ ಬಳಿ ಹೆದ್ದಾರಿಗೆ ಹತ್ತುವಂತೆ, ಬೊಬ್ಬರ್ಯನಕಟ್ಟೆಗಿಂತ ತುಸು ಮುಂದೆ ಅಂಡರ್‌ಪಾಸ್‌ ಮುಗಿಯುವಲ್ಲಿ ಹೆದ್ದಾರಿಯಿಂದ ಇಳಿಯಲು ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ಸಾರ್ವಜನಿಕರದ್ದಾಗಿದೆ.

ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿ
ಕುಂದಾಪುರ ನಗರ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಯೇ ಅವೈಜ್ಞಾನಿಕವಾಗಿದೆ. ಒಮ್ಮೆ ಫ್ಲೈಓವರ್ ಹತ್ತಿದರೆ ನೀವು ನಗರಕ್ಕೆ ಬರಬೇಕಾದರೆ 3-4 ಕಿ.ಮೀ. ಸುತ್ತು ಹಾಕಿ ಬರಬೇಕು. ಈಗ‌ ಇಂಧನ ದರವೂ ದುಬಾರಿ ಆಗಿರುವುದ ರಿಂದಾಗಿ ಇದು ಜನರಿಗೆ ಹೆಚ್ಚುವರಿ ಹೊರೆಯಾಗಿದೆ. ಇನ್ನು ಇಲ್ಲಿನ ಬಹುತೇಕ ಎಲ್ಲ ವ್ಯಾಪಾರ – ವಹಿವಾಟಿಗೆ ನೇರ ಹೊಡೆತ ಬಿದ್ದಿದೆ. ಅಂಡರ್‌ಪಾಸ್‌ ಹಾಗೂ ಫ್ಲೈಓವರ್ ಮಧ್ಯೆ ನಗರದ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದರೂ, ಹೆದ್ದಾರಿ ಇಲಾಖೆಯು ಅದನ್ನು ನಿರ್ಲಕ್ಷಿಸುವ ಮೂಲಕ ಉದ್ಧಟತನ ತೋರಿದೆ. ಯಾವುದೇ ಇಲಾಖೆ ಅಥವಾ ಸರಕಾರಗಳು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೇ ಹೊರತು, ಅವರ ಸ್ವಹಿತಾಸಕ್ತಿಗಲ್ಲ ಎನ್ನುವುದಾಗಿ ಉಡುಪಿ ಜಿಲ್ಲಾ ಬೇಕರಿ ಅಸೋಸಿಯೇಶನ್‌ನ ಕಾನೂನು ಸಲಹೆಗಾರ ಶ್ರೀಧರ್‌ ಪಿ.ಎಸ್‌. ಹೇಳಿದ್ದಾರೆ.

ಪ್ರವೇಶ ಕಲ್ಪಿಸಬೇಕು
ಹೆದ್ದಾರಿಯಿಂದ ಪುರಸಭೆಗೆ ಎಲ್ಲೂ ಪ್ರವೇಶವೇ ನೀಡಿಲ್ಲ. ಉಡುಪಿಯಿಂದ ಬರುವಾಗ ಹಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೀಡಿರುವುದು. ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿಯಿಂದ ನಗರಕ್ಕೆ ಬರಲು ಅನುಕೂಲವಾಗುವಂತೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪುರಸಭೆ ಉಪಾಧ್ಯಕ್ಷ ಸಂದೀಪ್‌ ಖಾರ್ವಿ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜನರ ಪ್ರಯೋಜನಕ್ಕೆ ಮಾಡಿರುವುದೋ ಅಥವಾ ಹೆದ್ದಾರಿ ಇಲಾಖೆಯ ಸ್ವಹಿತಕ್ಕಾಗಿ ಮಾಡಿದೆಯೇ? ಕಾಮಗಾರಿ ಆರಂಭದಿಂದಲೂ ಸಾಕಷ್ಟು ಲೋಪ ದಿಂದಲೇ ಕೂಡಿದೆ. ಇದರಿಂದಾಗಿ ಕುಂದಾಪುರ ನಗರದ ಜನರಿಗೆ ಸಾಕಷ್ಟು ಅನ್ಯಾಯವಾಗಿದೆ. ನಮ್ಮ ಗೋಳನ್ನು ಯಾರೂ ಕೇಳುವವರೇ ಇಲ್ಲ ಎಂದು ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್‌ ಕುಮಾರ್‌ ಆರೋಪಿಸಿದ್ದಾರೆ.

Advertisement

ಇದನ್ನೂ ಓದಿ:ಗೃಹ ಸಚಿವರು ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದಾದ ಸಮಯ ತಿಳಿಸಲಿ:ಅಮ್ರಪಾಲಿ ಸುರೇಶ್

ಆರ್ಥಿಕತೆಗೆ ಭಾರೀ ಹೊಡೆತ
ಫ್ಲೈಓವರ್ ಕಾಮಗಾರಿ ಹಾಗೂ ಅಂಡರ್‌ಪಾಸ್‌ನಿಂದಾಗಿ ಕುಂದಾಪುರ ನಗರಕ್ಕೆ ನೇರ ಪ್ರವೇಶ ನೀಡದಿರುವುದರಿಂದ ಇಲ್ಲಿನ ವ್ಯಾಪಾರ- ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ. ಪ್ರವಾಸಿಗರು, ದೂರ-ದೂರಿನ ಪ್ರಯಾಣಿಕರು ಇಲ್ಲಿಗೆ ಬರದೇ ನೇರ ಸಂಚರಿಸುವುದರಿಂದ ಇಲ್ಲಿನ ವ್ಯಾಪಾರ ಬೇರೆ ಪೇಟೆಗಳಿಗೆ ಸಿಗುವಂತಾಗಿದೆ. ಇಲ್ಲಿನ ಶೇ. 80ರಷ್ಟು ವ್ಯಾಪಾರ ತಪ್ಪಿ ಹೋಗುತ್ತಿದೆ. ಆದರೆ ಕುಂದಾಪುರ ಹೊರತುಪಡಿಸಿ, ಭಟ್ಕಳ, ಹೊನ್ನಾವರ, ಕುಮಟಾದವರೆಗೂ ಎಲ್ಲೂ ಉತ್ತಮ ಸಸ್ಯಾಹಾರಿ ಹೊಟೇಲ್‌ಗ‌ಳಿಲ್ಲ. ಕುಂದಾಪುರದ ಅಭಿವೃದ್ಧಿಗೂ ಇದು ಮಾರಕವಾಗಿದೆ ಎನ್ನುವ ಅಭಿಪ್ರಾಯವನ್ನು ಜ್ಯೂಸ್‌ ಪಾರ್ಲರ್‌ ಮಾಲಕ ಸುರೇಶ್‌ ಭಂಡಾರ್ಕರ್‌ ವ್ಯಕ್ತಪಡಿಸಿದ್ದಾರೆ.

ಪಿಡಿ ವಿರುದ್ಧ ತನಿಖೆಯಾಗಲಿ
ಅಂಡರ್‌ಪಾಸ್‌ ಹಾಗೂ ಫ್ಲೈಓವರ್ ಮಧ್ಯೆ ಪ್ರವೇಶ ನೀಡದಿರುವುದರಿಂದ ಮೂಡ್ಲಕಟ್ಟೆಗೆ ತೆರಳುವ ರೈಲು ಪ್ರಯಾಣಿಕರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಬೈಂದೂರು ಅಥವಾ ಉಡುಪಿ ಕಡೆಯಿಂದ ಬರುವ ರೈಲ್ವೇ ಪ್ರಯಾಣಿಕರು ಸರ್ವಿಸ್‌ ರಸ್ತೆಯಲ್ಲಿಯೇ ಬರಬೇಕಿದೆ. ನಾವು ಬೊಬ್ಬರ್ಯನಕಟ್ಟೆ ಬಳಿ ಪ್ರವೇಶ ನೀಡಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರೂ, ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು ನಿರಾಕರಿಸಿರುವುದು ಸರಿಯಲ್ಲ. ಬೇರೆ ಎಲ್ಲ ಕಡೆಗಳಲ್ಲಿ ಅಂಡರ್‌ಪಾಸ್‌ ಅಥವಾ ಫ್ಲೈಓವರ್ ಪಕ್ಕದಲ್ಲೇ ಪ್ರವೇಶ ನೀಡಿದ್ದಾರೆ. ಈಗಿನ ಯೋಜನಾ ನಿರ್ದೇಶಕರ ವಿರುದ್ಧ ಪ್ರಭಾವವಿದ್ದರೆ, ಹಣ ನೀಡಿದರೆ ಎಲ್ಲಿ ಬೇಕಾದರೂ ಅವಕಾಶ ನೀಡುತ್ತಾರೆನ್ನುವ ಆರೋಪವಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌ ಆಗ್ರಹಿಸಿದ್ದಾರೆ.

ನಗರಕ್ಕೆ ಪ್ರವೇಶ ಕೊಡಲೇಬೇಕು
ಹೆದ್ದಾರಿಯಿಂದ ಕುಂದಾಪುರಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಪ್ರವೇಶ ಕಲ್ಪಿಸಿಕೊಡಬೇಕು ಎನ್ನು ವುದಾಗಿ ಈ ಹಿಂದೆಯೇ ಮನವಿ ಸಲ್ಲಿಸಿದ್ದೆವು. ಈ ಬಗ್ಗೆ ಪುರಸಭೆ ಹಾಗೂ ಜನಾಭಿಪ್ರಾಯವನ್ನು ಸಹ ಶಾಸಕರು, ಸಂಸದರಿಗೆ ತಿಳಿಸಲಾಗಿತ್ತು. ಆದರೆ ಹೆದ್ದಾರಿ ಇಲಾಖೆಯವರು ಈಗ ಆಗುವುದಿಲ್ಲ ಎಂದು ಹೇಳಿರುವುದು ಸರಿಯಲ್ಲ. ಈ ಬಗ್ಗೆ ಮತ್ತೆ ಶಾಸಕರು, ಸಂಸದರ ಗಮನಕ್ಕೆ ತರಲಾಗುವುದು.
– ವೀಣಾ ಭಾಸ್ಕರ ಮೆಂಡನ್‌, ಕುಂದಾಪುರ ಪುರಸಭಾಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next