ಭಾರತದ ಪರಮಾಪ್ತ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ನೆರೆಯ ಬಾಂಗ್ಲಾದೇಶದಲ್ಲಿನ ಕಳೆದ ಕೆಲವು ತಿಂಗಳುಗಳಿಂದೀಚಿನ ಬೆಳವಣಿಗೆಗಳು, ಅದು ಭಾರತದ ವಿರುದ್ಧವೇ ತಿರುಗಿಬಿದ್ದಿರುವುದನ್ನು ಪುಷ್ಟೀಕರಿಸುತ್ತಿವೆ. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಭಾರತ ಇಡೀ ವಿಶ್ವ ಸಮುದಾಯವನ್ನು ಎದುರು ಹಾಕಿಕೊಂಡು ಯುದ್ಧವನ್ನು ಸಾರಿ ಬಾಂಗ್ಲಾವನ್ನು ಪಾಕ್‌ನ ಕಪಿಮುಷ್ಟಿಯಿಂದ ಬಂಧಮುಕ್ತಗೊಳಿಸಿತ್ತೋ ಅದೇ ರಾಷ್ಟ್ರವೀಗ ಭಾರತದ ವಿರುದ್ಧ ಕತ್ತಿ ಮಸೆಯಲಾರಂಭಿಸಿರುವುದು ವಿಪರ್ಯಾಸವಲ್ಲದೆ ಇನ್ನೇನಲ್ಲ.
ಬಾಂಗ್ಲಾದಲ್ಲಿನ ಮೂಲಭೂತವಾದಿ ಸಂಘಟನೆಗಳು ಮತ್ತು ವಿಪಕ್ಷ ಜತೆ ಗೂಡಿ ರಾಜಕೀಯ ದಂಗೆ ನಡೆಸಿ, ಅರಾಜಕತೆಯ ವಾತಾವರಣ ಸೃಷ್ಟಿಸಿ ಚುನಾಯಿತ ಪ್ರಧಾನಿ ಶೇಖ್ ಹಸೀನಾರನ್ನು ಪದಚ್ಯುತಿಗೊಳಿಸಿದಾಗಿನಿಂದ ಅಲ್ಲಿ ರುವ ಹಿಂದೂ ಸಮುದಾಯ, ಹಿಂದೂಗಳ ಆರಾಧನ ಕೇಂದ್ರಗಳನ್ನು ಗುರಿ ಯಾಗಿಸಿ ನಿರಂತರವಾಗಿ ದಾಳಿಗಳನ್ನು ನಡೆಸುತ್ತಲೇ ಬರಲಾಗಿದೆ. ಮೊಹ ಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಾಂತರ ಸರಕಾರ ರಚನೆಯಾದ ಬಳಿಕ ಈ ಎಲ್ಲ ದೌರ್ಜನ್ಯ, ದಬ್ಟಾಳಿಕೆಗಳಿಗೆ ಕಡಿವಾಣ ಬಿದ್ದೀತು ಎಂಬ ಭಾರತೀಯರ ನಿರೀಕ್ಷೆ ಹುಸಿಯಾದದ್ದೇ ಅಲ್ಲದೆ ಬಾಂಗ್ಲಾದ ಭಾರತ ವಿರೋಧಿ ಮನಃಸ್ಥಿತಿ ಅತಿರೇಕಕ್ಕೆ ತಲುಪಿರುವುದು ಕೇವಲ ಭಾರತದ ಭದ್ರತೆಗೆ ಸವಾಲಾಗಿ ಪರಿ ಣಮಿಸಿ ರುವುದೇ ಅಲ್ಲದೆ ಸ್ವತಃ ಬಾಂಗ್ಲಾದೇಶದ ಭವಿಷ್ಯವನ್ನೇ ಮಸುಕಾಗಿಸಿದೆ.
ಬಾಂಗ್ಲಾ ವಿಮೋಚನ ಸಮರದ ವೇಳೆಯೂ ಪಾಕ್ ಪರವಾಗಿದ್ದ ಅಲ್ಲಿನ ಮೂಲಭೂತವಾದಿ ಸಂಘಟನೆಗಳು ಮತ್ತು ಬೆಂಬಲಿತ ಪಕ್ಷದ ಪ್ರಭಾವ ಈಗ ಅಲ್ಲಿನ ಮಧ್ಯಾಂತರ ಸರಕಾರದ ಮೇಲೆ ಹೆಚ್ಚಾಗಿದ್ದು, ಅವುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಪಾಕಿಸ್ಥಾನದೊಂದಿಗೆ ಕೈಜೋಡಿಸಿರುವ ಬಾಂಗ್ಲಾ ಸರಕಾರ ಅಲ್ಲಿಂದ ಸರಕುಗಳನ್ನು ಆಮದು ಮಾಡಿಕೊಳ್ಳತೊಡಗಿದೆ. ಭಾರತದಲ್ಲಿ ಉಗ್ರಗಾಮಿ ಕೃತ್ಯಗಳನ್ನು ಎಸಗಿದ್ದ, ಉಗ್ರರಿಗೆ ನೆರವು ಒದಗಿಸಿದ್ದವರನ್ನು ಜೈಲಿನಿಂದ ಬಿಡುಗಡೆ ಮಾಡುವ ಧಾಷ್ಟéìತನ ತೋರಿದೆ. ಇವೆಲ್ಲವೂ ಭಾರತದ ಶತ್ರು ರಾಷ್ಟ್ರಗಳಾದ ಪಾಕಿಸ್ಥಾನ ಮತ್ತು ಚೀನದ ಚಿತಾವಣೆಯ ಪರಿಣಾಮ ಎಂಬುದಕ್ಕೆ ಬೇರೆ ಸಾಕ್ಷ್ಯಾಧಾರಗಳ ಅಗತ್ಯವಿಲ್ಲ.
ಜಾಗತಿಕವಾಗಿ ಪ್ರಗತಿ ಪಥದಲ್ಲಿ ಹೆಜ್ಜೆ ಇರಿಸಿರುವ ಭಾರತದ ನಾಗಾಲೋಟಕ್ಕೆ ಕಡಿವಾಣ ಹಾಕಿ, ಈ ಪ್ರದೇಶದಲ್ಲಿ ತನ್ನ ಪಾರಮ್ಯ ಮೆರೆಯಲು ಹರಸಾಹಸ ಪಡುತ್ತಿರುವ ಚೀನ, ಪಾಕಿಸ್ಥಾನದ ಜತೆಗೂಡಿ ಬಾಂಗ್ಲಾದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರದಲ್ಲಿ ನಿರತವಾಗಿದೆ. ತನ್ನ ಅಧಿಕಾರವನ್ನು ಉಳಿಸಿ ಕೊಳ್ಳುವ ಇರಾದೆಯಿಂದ ಬಾಂಗ್ಲಾದ ಮಧ್ಯಾಂತರ ಸರಕಾರದ ನೇತೃತ್ವ ವಹಿಸಿರುವ ಮೊಹಮ್ಮದ್ ಯೂನಸ್ ಈ ರಾಷ್ಟ್ರಗಳ ಮುಂದೆ ಮಂಡಿಯೂರಿದ್ದಾರೆ.
ತನ್ನ ಕಾಲ ಮೇಲೆ ಕಲ್ಲು ಹಾಕಿಕೊಳ್ಳುತ್ತಿರುವ ಬಾಂಗ್ಲಾ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದೇ ಹೋದಲ್ಲಿ ಮತ್ತೂಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ.
ಈಗಾಗಲೇ 50,000 ಟನ್ ಅಕ್ಕಿಗಾಗಿ ಭಾರತದ ಮುಂದೆ ಕೈಚಾಚಿರುವ ಬಾಂಗ್ಲಾ, ವ್ಯಾವಹಾರಿಕ ಮತ್ತು ಆರ್ಥಿಕವಾಗಿಯೂ ಭಾರತದ ನೆರವನ್ನೇ ಆಶ್ರಯಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾ ಸರಕಾರದ ನಡೆಗಳು ತೀರಾ ಬಾಲಿಶ ಮತ್ತು ಸಮಯಸಾಧಕತನವಲ್ಲದೆ ಇನ್ನೇನಲ್ಲ. ಇನ್ನಾದರೂ ಭಾರತ ವಿರೋಧಿ ಧೋರಣೆಯನ್ನು ಕೈಬಿಡದೇ ಹೋದಲ್ಲಿ ಸದ್ಯೋಭವಿಷ್ಯದಲ್ಲಿ ಬಾಂಗ್ಲಾದ ಪರಿಸ್ಥಿತಿ ಸಂಪೂರ್ಣ ಅಯೋಮಯವಾಗಲಿರುವುದು ನಿಶ್ಚಿತ.
ಇದೇ ವೇಳೆ ಭಾರತ ಕೂಡ ತನ್ನ ಭದ್ರತೆ ಹಾಗೂ ಪ್ರಾದೇಶಿಕ ಶಾಂತಿಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಬಾಂಗ್ಲಾದಲ್ಲಿನ ಸದ್ಯದ ಬೆಳವಣಿಗೆಗಳು ಮತ್ತು ಅಲ್ಲಿನ ಮಧ್ಯಾಂತರ ಸರಕಾರದ ದೂರದೃಷ್ಟಿ ರಹಿತ ಆಡಳಿತ, ನೀತಿನಿರೂಪಣೆಗಳ ಮೇಲೆ ನಿಗಾ ಇರಿಸಬೇಕಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಈಗಾಗಲೇ ಬಾಂಗ್ಲಾದೇಶ ಭಾಗಶಃ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿರುವುದರಿಂದ ಬಾಂಗ್ಲಾದ ಕುರಿತಾಗಿನ ತನ್ನ ನಿಲುವನ್ನು ಭಾರತ ಒಂದಿಷ್ಟು ಕಠಿನಗೊಳಿಸುವುದು ಅನಿವಾರ್ಯ.