ಮಂಗಳೂರು: ಹಿಂದೂ ಸಮಾಜದ ಮೇಲೆ ಮಿಥ್ಯಾರೋಪಗಳು ನಿರಂತರವಾಗಿ ನಡೆಯುತ್ತಿವೆ. ಹಿಂದೂ ಏಕತೆಯೇ ಸವಾಲುಗಳಿಗೆ ಉತ್ತರವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ದೆ ಹೇಳಿದರು.
ಸಂಘನಿಕೇತನದಲ್ಲಿ ನಡೆಯುತ್ತಿರುವ ವಿಹಿಂಪ ಅಂತಾರಾಷ್ಟ್ರೀಯ ಬೈಠಕ್‌ನಲ್ಲಿ ಗಣ್ಯರೊಂದಿಗೆ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು. ಹಿಂದೂಗಳನ್ನು ದಲಿತ ವಿರೋಧಿಗಳಾಗಿ ಬಿಂಬಿಸುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರುದ್ಧ ಅಪಪ್ರಚಾರ ನಡೆಸಿ ಹಿಂದೂಗಳನ್ನು ಒಡೆಯುವ ಕೆಲಸವಾಗುತ್ತಿದೆ. ಹಿಂದೂ ಏಕತೆ ಮೂಲಕ ಇವಕ್ಕೆಲ್ಲ ಉತ್ತರ ನೀಡಬೇಕಾದ ಅಗತ್ಯ ಇಂದಿದೆ ಎಂದರು.
ವಿಹಿಂಪ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾತನಾಡಿ, ದುರ್ಜನರ ಕ್ರೌರ್ಯಕ್ಕಿಂತ ಸಜ್ಜನರ ನಿಷ್ಕ್ರಿಯತೆಯೇ ಹಿಂದೂ ಸಮಾಜಕ್ಕೆ ಅಪಾಯ. ಆದರೆ ಹಿಂಸೆಯ ಮೂಲಕ ಹಿಂದೂ ಸಮಾಜವನ್ನು ಹೆಸರಿಸಲು ಸಾಧ್ಯವಿಲ್ಲ ಎಂಬುದು ಅಷ್ಟೇ ಸತ್ಯ ಎಂದರು.
ವಿಹಿಂಪ ಕೇಂದ್ರೀಯ ಕಾರ್ಯದರ್ಶಿ ಅಲೋಕ್ ಕುಮಾರ್ ಮಾತನಾಡಿದರು.ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್ ಉಪಸ್ಥಿತರಿದ್ದರು. “ಸಮರ್ಪಣಾ’ ಪುಸ್ತಕವನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ಪುಸ್ತಕದ ಬಗ್ಗೆ ತಿಳಿಸಿದರು. ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು.