Advertisement

ನೊರೆಗೆ ಉತ್ತರ ಕೊಡಬೇಕಿದೆ ಸರ್ಕಾರ

11:30 AM Aug 18, 2017 | Team Udayavani |

ನವದೆಹಲಿ/ಬೆಂಗಳೂರು: ಬೆಳ್ಳಂದೂರು ಕೆರೆಯಿಂದ ಹೊರಬರುತ್ತಿರುವ ನೊರೆ ಹಾವಳಿ ತಪ್ಪಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ? ಇದು ರಾಷ್ಟ್ರೀಯ ಹಸಿರು ಪೀಠ ರಾಜ್ಯ ಸರ್ಕಾರವನ್ನು ಕೇಳಿದ ಪ್ರಶ್ನೆ.

Advertisement

ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸ್ವತಂತರ್‌ ಕುಮಾರ್‌ ನೇತೃತ್ವದ ಹಸಿರುಪೀಠ ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಿರುವ ಸಮನ್ಸ್‌ನಲ್ಲಿ ಕೇಳಿರುವ ಪ್ರಶ್ನೆ.

ಅಲ್ಲದೆ, ನೊರೆ ಹೋಗಲಾಡಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಇದೇ 22ರಂದು ಖುದ್ದು ಕೋರ್ಟ್‌ಗೆ ಹಾಜರಾಗಿ ವಿವರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆ.15 ಮತ್ತು 16 ರಂದು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಂದ ಭಾರಿ ಪ್ರಮಾಣದ ನೊರೆ ಹೊರಬಂದಿದೆ.

ಎರಡೂ ದಿನ ದೇಶದ ಎಲ್ಲಾ ಮಾಧ್ಯಮಗಳಲ್ಲಿ ನೊರೆ ಸುದ್ದಿ ಬಂದಿರುವುದನ್ನು ಎನ್‌ಜಿಟಿ ನೋಡಿ ತಿಳಿದಿದೆ. ಇದರಿಂದಾಗಿಯೇ ಕರ್ನಾಟಕ ಸರ್ಕಾರದ ವಿರುದ್ಧ ಸಿಟ್ಟಿಗೆದ್ದ ನ್ಯಾ. ಸ್ವತಂತ್ರಕುಮಾರ್‌ ತಾವು ಹಿಂದೆ ನೀಡಿರುವ ಆದೇಶಗಳ ವಿಚಾರ ಏನಾಯಿತು? ನೊರೆ ಹೋಗಲಾಡಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆ ಹಾಕಿದೆ. 

ಎನ್‌ಜಿಟಿಯ ಹಲವು ಪ್ರಶ್ನೆಗಳು
– ಇದುವರೆಗೆ ಎಷ್ಟು ರಾಜಕಾಲುವೆಗಳನ್ನು ತೆರವು ಮಾಡಿದ್ದೀರಿ?

Advertisement

– ಎಷ್ಟು ರಾಜಕಾಲುವೆಗಳಿಂದ ಕಸವನ್ನು ಹೊರಗೆ ತೆಗೆದಿದ್ದೀರಿ, ಅದೂ ಬೆಳ್ಳಂದೂರು ಕೆರೆಗೆ ಸೇರುವ ರಾಜಾಕಾಲುವೆಯಿಂದ ಯಾವ ಪ್ರಮಾಣದ ಕಸ ತೆಗೆದಿದ್ದೀರಿ?

– ತೆಗೆದ ಕಸವನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ಹಾಕುತ್ತೀದ್ದೀರಿ?

– ನೊರೆ ತಪ್ಪಿಸಲು ಯಾವ ಯಾವ ಕ್ರಮ ತೆಗೆದುಕೊಂಡಿದ್ದೀರಿ?

ಎನ್‌ಜಿಟಿಯ ಎಲ್ಲಾ ಪ್ರಶ್ನೆಗಳಿಗೆ ಆ.22 ರಂದು ರಾಜ್ಯ ಸರ್ಕಾರ ಉತ್ತರ ಕೊಡಬೇಕಿದೆ. ಈ ಉತ್ತರವನ್ನು ಕೋರ್ಟ್‌ನ ಆಯುಕ್ತರು ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ ಎಂದೂ ಹಸಿರು ಪೀಠ ಹೇಳಿದೆ. 

ಹಿಂದೆಯೂ ಎಚ್ಚರಿಸಿದ್ದ ಎನ್‌ಜಿಟಿ
ಕಳೆದ ಫೆಬ್ರವರಿಯಲ್ಲಿ ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಯಿಂದ ಹೊರಬರುತ್ತಿದ್ದ ನೊರೆ ವಿಚಾರವಾಗಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ರಾಷ್ಟ್ರೀಯ ಹಸಿರುಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೆ ಏಪ್ರಿಲ್‌ನಲ್ಲೂ ಮತ್ತೂಮ್ಮೆ ವಿಚಾರಣೆ ನಡೆಸಿ, ಬೆಳ್ಳಂದೂರು ಕೆರೆ ಹತ್ತಿರವಿರುವ ಎಲ್ಲ ಕಾರ್ಖಾನೆಗಳನ್ನು ಮುಚ್ಚಿಸುವಂತೆ ಆದೇಶಿಸಿತ್ತು. 

ರಾಜ್ಯ ಹೈಕೋರ್ಟ್‌ನಿಂದ ತಡೆ
ಎನ್‌ಜಿಟಿ ಆದೇಶದಿಂದಾಗಿ ಕಾರ್ಖಾನೆಗಳನ್ನು ಮುಚ್ಚಲು ಹೊರಟಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿತ್ತು. ಜೂ.15 ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಮತ್ತು ನ್ಯಾ. ದಿನೇಶ್‌ಕುಮಾರ್‌ ಅವರಿದ್ದ ಪೀಠ ಎನ್‌ಜಿಟಿ ಆದೇಶಕ್ಕೆ ತಡೆ ನೀಡಿತ್ತು. ಅಲ್ಲದೆ, ಕರ್ನಾಟಕ ರಾಷ್ಟ್ರೀಯ ಹಸಿರುಪೀಠದ ಪ್ರಧಾನ ಪೀಠದ ಅಡಿಯಲ್ಲಿ ಬರುವುದೇ ಇಲ್ಲ. ಹೀಗಾಗಿ ಬೆಳ್ಳಂದೂರು ಕೆರೆ ಬಗ್ಗೆ ವಿಚಾರಣೆ ನಡೆಸುವ, ಆದೇಶ ಅಥವಾ ತೀರ್ಪು ನೀಡುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಹುಳಿಮಾವಿನ ಕೈಗಾರಿಕೆಯೊಂದು ವಾದಿಸಿತ್ತು. ಇದನ್ನು ಆಲಿಸಿದ್ದ ಕೋರ್ಟ್‌ ಮಧ್ಯಂತರ ಆದೇಶದ ರೂಪದಲ್ಲಿ ಎನ್‌ಜಿಟಿ ಆದೇಶಕ್ಕೆ ತಡೆ ನೀಡಿತ್ತು. 

ಒಂದು ಅಥವಾ ಎರಡು ವರ್ಷದಲ್ಲಿ ನಿವಾರಣೆ
ಈ ಮಧ್ಯೆ ಎನ್‌ಜಿಟಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ದೆಹಲಿಯಲ್ಲೇ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ನು ಒಂದು ಅಥವಾ ಎರಡು ವರ್ಷದಲ್ಲಿ ಬೆಳ್ಳಂದೂರು ಕೆರೆಯಿಂದ ಹೊರಬರುತ್ತಿರುವ ನೊರೆ ಸಮಸ್ಯೆಯನ್ನು ನಿವಾರಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ದಿಢೀರ್‌ನೆರೆಯಿಂದಾಗಿ ಬೆಳ್ಳಂದೂರು ಕೆರೆಯಿಂದ ಮತ್ತೆ ನೊರೆ ಹೊರಬಂದಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next