ಹೇಗಿದ್ದೀಯೋ? ಯಾಕೆ ನಿಂಗೆ ಪ್ರತಿ ಲೆಟರ್‌ನಲ್ಲೂ ಹಾಯ್ ಅಂತ ಹೇಳ್ತೀನಿ ಗೊತ್ತಾ? ಆ ಪದವೇ ಅಲ್ವಾ ನಮ್ಮಿಬ್ಬರ ಮೊದಲ ಭೇಟಿಯಲ್ಲಿ, ಮೊದಲ ಸಂಭಾಷಣೆಯಲ್ಲಿ ಉದುರಿದ್ದು. ಪ್ರತಿಯೊಬ್ಬ ಪ್ರೇಮಿಯೂ ಪ್ರೇಮ ಪತ್ರದಲ್ಲಿ ತನ್ನ ಪ್ರೀತಿಯ ಹೊಗಳಿಕೆಯನ್ನು ದಾಖಲಿಸುತ್ತಾನೆ. ಆದರೆ, ನಾನಿಂದು ಹೇಳಹೊರಟಿರುವುದು ನನ್ನ ಮನಸ್ಸಿನಲ್ಲಿ ಆಗುತ್ತಿರುವ ತುಮುಲವನ್ನು. ಇವತ್ತು ತಂಬಾ ಒಂಟಿಯಾಗಿ ಇರಬೇಕು ಅನ್ನಿಸುತ್ತಿದೆ. ಇದರ ಅರ್ಥ ನನಗೆ ಬೇಜಾರಾಗಿದೆ ಅಂತಲ್ಲ. ಬದಲಿಗೆ ನಿನ್ನೊಂದಿಗೆ ಮಾತಾಡಬೇಕಿದೆ. ನನ್ನೆದೆಯಲ್ಲಿ ಅಚ್ಚಳಿಯದೆ ಪ್ರೀತಿಯ ಹೊನಲನ್ನ ಹರಿಸಿ ಕೂತಿರುವ ಪ್ರೇಮಮೂರ್ತಿಯ ನೆನಪಿನೊಂದಿಗೆ, ಅವನಾಸೆಯ ಅಲೆಗಳೊಂದಿಗೆ, ನನ್ನಾಸೆಯ ಕನಸಿನೊಂದಿಗೆ ಕೂತು ಮಾ ತಾಡಬೇಕಿದೆ. ನಮ್ಮ ಬದುಕಿನ ಬಗ್ಗೆ, ಕನಸನ್ನು ನನಸಾಗಿಸಿ ಜೀವನ ಕಟ್ಟಿಕೊಳ್ಳುವ ಸಲುವಾಗಿ ಚರ್ಚೆ ನಡೆಸಬೇಕಿದೆ. ನಿನಗೆ ತಿಳಿದಿದೆ, ನಾನೆಷ್ಟು ಸ್ವತಂತ್ರವಾಗಿ ನಲಿಯಬೇಕೆಂಬ ಆಸೆ ಹೊತ್ತವಳು ಎಂದು. ಎಲ್ಲ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಬದುಕಬೇಕೆಂದುಕೊಂಡವಳು ಎಂದು. ಆದರೆ, ನನಗೇ ಗೊತ್ತಿಲ್ಲದಂತೆ ಈ ಸಮಾಜ ನಿರ್ಮಿಸಿರುವ ಬಂಧನದೊಳಗೆ ಸಿಲುಕಿ ತೊಳಲಾಡುತ್ತಿದ್ದೇನೆ.
Advertisement
ಈ ಸಮಾಜ ನನಗೆ “ಹುಚ್ಚಿ’ ಎಂಬ ಹಣೆಪಟ್ಟಿ ನೀಡಿದೆ. ಆದರೂ ಒಂಥರಾ ಖುಷಿಯಿದೆ ನನಗೆ. ಏಕೆಂದರೆ, ಎಲ್ಲರಿಗೂ ಸಂಪತ್ತು ಹೊಂದುವ ಹುಚ್ಚು, ಕೆಲವರಿಗೆ ನೆಲದ ಹುಚ್ಚು, ಇನ್ನು ಹಲವರಿಗೆ ಮತ್ತೂಬ್ಬರಿಗೆ ಹಿಂಸಿಸಿ ಆನಂದಪಡುವ ಹುಚ್ಚು, ಮಗದೊಬ್ಬರಿಗೆ ಚುಚ್ಚಿ ನುಡಿಯುವ ಹುಚ್ಚು, ಇರಿಯುವ, ಉರಿಯುವ… ಹೀಗೆ ಏನೇನೋ ಹುಚ್ಚು. ಆದರೆ, ನನಗೆ ಇರುವುದೊಂದೇ, ಓದನ್ನು ಆರಾಧಿಸುವುದು. ಅದರಲ್ಲಿ ಯಾರೊಬ್ಬರಿಗೂ ತೊಂದರೆ ನೀಡದ ಸಾತ್ವಿಕ ಸ್ಥಿತಿ ಇದ್ದರೂ ನನ್ನಿಷ್ಟದಂತೆ ಬದುಕಲು ಸಮಾಜವೇಕೆ ಒಪ್ಪುತ್ತಿಲ್ಲ, ಒಪ್ಪುವುದಿಲ್ಲ? ಅಲ್ಲಿನ ನಿಬಂ ಧನೆಗಳಿಗೆ, ಅರ್ಥವಿರದ ನಿಯಮಗಳಿಗೆ ನಾನೇಕೆ ನನ್ನ ಕನಸುಗಳನ್ನು ಚಿವುಟಬೇಕು? ತಿಳಿಯುತ್ತಿಲ್ಲ.
Related Articles
Advertisement