Advertisement

ಹೈ.ಕ.ಕ್ಕೆ ಕಲ್ಯಾಣ ರಾಜ್ಯ ಸೀಮಿತ ಘೋಷಣೆ ಸಾಧುವಲ್ಲ

03:13 PM Mar 27, 2017 | |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ರಾಜ್ಯ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡುವುದು ಒಂದು ಸೀಮಿತ ಪ್ರದೇಶಕ್ಕೆ ಮಾತ್ರ ಸರಿಯಲ್ಲ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ| ಟಿ.ಆರ್‌. ಚಂದ್ರಶೇಖರ ಹೇಳಿದರು. 

Advertisement

ನಗರದ ಕಲಾನಿಕೇತನದಲ್ಲಿ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಆಂದೋಲನ ಸಮಿತಿ ಹಮ್ಮಿಕೊಂಡಿದ್ದ 371ನೇ (ಜೆ) ಕಲಂ ಜಾರಿ ಹಾಗೂ ಕಲ್ಯಾಣ ರಾಜ್ಯದ ಕಲ್ಪನೆ ಹಾಗೂ 371ನೇ (ಜೆ) ಕಲಂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಲ್ಯಾಣ ರಾಜ್ಯ:ರಾಜಕೀಯ ಅರ್ಥಶಾಸ್ತ್ರದ ಪರಿಭಾಷೆಗಾಗಿ ವಿಷಯ ಕುರಿತು ಅವರು ಮಾತನಾಡಿದರು.

 ಕೇವಲ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ರಾಜ್ಯ ಎಂದು ಶಾಸನಾತ್ಮಕವಾಗಿ ಘೋಷಣೆ ಮಾಡುವುದು ಅನಗತ್ಯ. ಯಾವುದೇ ಒಂದು ಪ್ರದೇಶವನ್ನು ಚಾರಿತ್ರಿಕ ಹಿನ್ನೆಲೆಯಿಂದಲೇ ಗುರುತಿಸಲಾಗುತ್ತದೆ. ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೂ ತನ್ನದೇ ಆದ ಇತಿಹಾಸವಿದೆ.

ಕೇವಲ ಕಲ್ಯಾಣ ರಾಜ್ಯ ಎಂದು ಕರೆದರೆ ಈ ಭಾಗ ಉದ್ಧಾರವಾಗದು. ಈ ಭಾಗದ ಜನ ಸಮಾನತೆ, ಗೌರವ, ಘನತೆಯಿಂದ ಬದುಕುವ ವಾತಾವರಣ ಸೃಷ್ಟಿಯಾದಾಗ ಮಾತ್ರ ನಿಜವಾದ ಕಲ್ಯಾಣ ರಾಜ್ಯವಾಗಲು ಸಾಧ್ಯ. ಅಂತಹ ಅಭಿವೃದ್ದಿಯಾಗದೇ ಇರುವಾಗ ಕಲ್ಯಾಣ ರಾಜ್ಯ ಎಂದು ಕರೆಯುವುದರಲ್ಲಿ ಯಾವ ಪುರುಷಾರ್ಥವಿದೆ ಎಂದು ಪ್ರಶ್ನಿಸಿದರು. 

ಇಡೀ ಕರ್ನಾಟಕವೇ ಬಸವ ಪ್ರಣಾಳಿಕೆ ಅನುಸರಿಸಬೇಕು. ಹಾಗಾಗಿ ಇಡೀ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆದರೆ ಹೆಚ್ಚು ಅರ್ಥಪೂರ್ಣವಾಗುವುದು. ಈ ಹೆಸರನ್ನು ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಸೀಮಿತಗೊಳಿಸುವುದು ಬೇಡ ಎಂದು ಹೇಳಿದರು. 

Advertisement

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ಕಲ್ಯಾಣ ಕರ್ನಾಟಕ ಹೆಸರನ್ನು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಇಡುವ ತೀರ್ಮಾನದ ಹಿಂದೆ ಕೋಮುವಾದಿಗಳ ಕೈವಾಡವಿದೆ ಎಂದು ಆರೋಪಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಎಸ್‌.ಎಲ್‌. ಪಾಟೀಲ, ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಜಾರಿಯಾಗಿರುವ 371ನೇ(ಜೆ) ಕಲಂ ಅನುಷ್ಠಾನದಲ್ಲಿನ ಲೋಪ, ದೋಷಗಳನ್ನು ನಿವಾರಿಸಬೇಕು.

ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. ಎನ್‌.ವಿ. ಕಾಲೇಜಿನ ಪ್ರಾಧ್ಯಾಪಕ ಡಾ| ಸೂರ್ಯಕಾಂತ ಸುಜ್ಯಾತ್‌ ಪುಸ್ತಕ ಪರಿಚಯಿಸಿದರು. ಡಾ| ರಂಜಾನ್‌ ದರ್ಗಾ ಅವರು ಕಲ್ಯಾಣ ರಾಜ್ಯ ನಿನ್ನೆ, ಇಂದು ಮತ್ತು ನಾಳೆ ವಿಷಯ ಕುರಿತು ಮಾತನಾಡಿದರು. ಮಾಜಿ ಸಚಿವ ಎಸ್‌.ಕೆ. ಕಾಂತಾ, ಸಿಐಟಿಯು ರಾಜ್ಯ ಉಪಾಧ್ಯಕ್ಷ ವಿ.ಜೆ.ಕೆ. ನಾಯರ್‌, ಡಾ| ಶಿವಗಂಗಾ ರುಮ್ಮಾ ಇದ್ದರು. ಶರಣಬಸಪ್ಪ ಮಮಶೆಟ್ಟಿ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next