Advertisement

ಸೌರ ವಿದ್ಯುತ್‌ ಘಟಕದಿಂದ ಪ್ರಾಣಿಗಳಿಗೆ ಸಂಕಷ್ಟ

12:03 PM Jan 09, 2018 | Team Udayavani |

ಹುಮನಾಬಾದ: ವಿವಿಧ ಇಲಾಖೆಗಳ ಅಧಿಕಾರಿಗಳ ನಿಲಕ್ಷ್ಯಕ್ಕೆ ಅರಣ್ಯ ಪ್ರದೇಶದ ಸುತ್ತ ನಡೆಯುತ್ತಿರುವ ಚಟುವಟಿಕೆಗಳಿಂದ ಕಾಡುಪ್ರಾಣಿಗಳ ಜೀವಕ್ಕೆ ಸಂಕಷ್ಟ ಎದುರಾಗಿದ್ದು, ಮೂರು ಕೃಷ್ಣ ಮೃಗಗಳು ಪ್ರಾಣ ಕಳೆದುಕೊಂಡಿವೆ.

Advertisement

ನಿರ್ಣಾ ಗ್ರಾಮದ ಹೊರವಲಯದಲ್ಲಿ ಸುಮಾರು 124 ಎಕರೆ ಪ್ರದೇಶದಲ್ಲಿ ಸೌರ ವಿದ್ಯುತ್‌ ತಯಾರಿಕಾ ಘಟಕ ಸ್ಥಾಪನೆಗೊಳ್ಳುತ್ತಿದೆ. ಪಕ್ಕದಲ್ಲಿ ಅರಣ್ಯ ಪ್ರದೇಶದ ಭೂಮಿ ಇದೆ. ಇಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಪರವಾನಗಿ ಇಲ್ಲದೇ ಕಾನೂನು ಮೀರಿ ಅರಣ್ಯ ಪ್ರದೇಶದ ಭೂಮಿಗೆ ತಂತಿ ಬೇಲಿ ಎಳೆಯಲಾಗಿದೆ. ಇದರಿಂದ ಪ್ರಾಣಿಗಳ ಜೀವಕ್ಕೆ ಆತಂಕ ಎದುರಾಗಿದ್ದು, ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ.

ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಅರಣ್ಯದ ಸುತ್ತ ನಡೆಯುವ ಚಟುವಟಿಕೆಗಳೇ ಕಾರಣವಾಗಿವೆ. ರಸ್ತೆ ಕಾಮಗಾರಿ, ವಿವಿಧ ಘಟಕಗಳ ಸ್ಥಾಪನೆಯಿಂದ ಪ್ರಾಣಿಗಳು ನಸಿಸುತ್ತಿವೆ. ನಿರ್ಣಾ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಪ್ರಕಾರ 50ಕ್ಕೂ ಅಧಿಕ ರಾಜ್ಯದ ಅಪರೂಪದ ಕೃಷ್ಣ ಮೃಗಗಳು ಇಲ್ಲಿವೆ. ಅಳಿವಿನಂಚಿನಲ್ಲಿರುವ ಇಂತಹ ಕೃಷ್ಣಮೃಗ ಸಂತತಿ ಉಳಿವಿಗಾಗಿ ಸಮುದಾಯದಲ್ಲಿ ಜಾಗೃತಿ ಮೂಡಬೇಕಾಗಿದೆ. ಪ್ರಾಣಿಗಳ ವಾಸ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಘಟಕಗಳು, ಬೇಲಿ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಕೂಡ ಇಲ್ಲಿ ಬೇಲಿ ಹಾಕಲಾಗಿದೆ. 

ಪರವಾನಗಿ ಇಲ್ಲ: ಸ್ಥಳೀಯ ನಿರ್ಣಾ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿ ಎರಡು ಬಾರಿ ಹೊಸ ಸೋಲಾರ್‌ ಕಂಪನಿಗೆ ಪರವಾನಗಿ ನೀಡದಂತೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಮಧ್ಯದಲ್ಲಿ ಅಂದಿನ ಪಿಡಿಒ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಿದ ಹಿನ್ನೆಲೆಯಲ್ಲಿ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಪಿಡಿಒ ಬದಲಾವಣೆ ಮಾಡಿ ಆದೇಶ ಹೊರಡಿಸಿದರೆ ಹೊರೆತು ಸೋಲಾರ್‌ ಘಟಕ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ಗ್ರಾಪಂ ಸದಸ್ಯರ ಮಾತು. ಕೃಷಿ ಚಟುವಟಿಕೆಗೆ ಮೀಸಲಾದ ಭೂಮಿಯಲ್ಲಿ ಭೂ ಪರಿರ್ವತನೆ ಮಾಡದೇ 124 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆ ಮಾಡಿರುವುದರಿಂದ ಪಂಚಾಯಿತಿಗೆ ತೆರಿಗೆ ಆಧಾರದಲ್ಲಿ ಬರಬೇಕಾಗಿದ್ದ ಕೋಟಿಗೂ ಅಧಿಕ ಅನುದಾನ ಬಾರದಾಗಿದೆ. ಗ್ರಾಮದಲ್ಲಿ ಮೂರು ಸೋಲಾರ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಅಧಿಕಾರಿಗಳ ಮೌನ: ಪರವಾನಗಿ ರಹಿತ ಹಾಗೂ ಎನ್‌ಎ ಆಗದ ಭೂಮಿಯಲ್ಲಿ ಸೋಲಾರ್‌ ಘಟಕಗಳನ್ನು ಸ್ಥಾಪನೆ ಮಾಡಿರುವುದ ರಿಂದ ಪಂಚಾಯಿತಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಈ ಕುರಿತು ಡಿಸಿ, ಸಹಾಯಕ ಆಯುಕ್ತರು, ತಾಪಂ ಇಒ ಸೇರಿದಂತೆ ತಾಲೂಕು, ಜಿಲ್ಲಾಮಟ್ಟದ ಅಧಿಕಾಗಳಿಗೆ ದೂರು ನೀಡಿದರೂ ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಯಾವ ಕಾರಣಕ್ಕೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ ಪ್ರಶ್ನಿಸಿದ್ದಾರೆ.

Advertisement

ನಿರ್ಣಾ ಗ್ರಾಮದ ರೇನಿವ್‌ ಪವರ್‌ ಘಟಕದಲ್ಲಿ ಜ.3ರಂದು ಎರಡು, ಜ.4ರಂದು ಒಂದು ಕೃಷ್ಣ ಮೃಗ ಮೃತಪಟ್ಟಿವೆ. ಅರಣ್ಯ ಪ್ರದೇಶದ ಎನ್‌ಒಸಿ ಪಡೆಯದೇ ಹಾಗೂ ಇಲಾಖೆಯ ಗಮನಕ್ಕೆ ತರದೇ ಸುತ್ತು ಬೇಲಿ ಹಾಕಿರುವುದು ಪ್ರಾಣಿಗಳ ಜೀವಕ್ಕೆ ಕಂಟಕವಾಗಿದೆ. ಮೃತಪ್ರಾಣಿಗಳ ಶವ ಪರೀಕ್ಷೆ ನಡೆಸಲಾಗಿದೆ. ಬೇಟೆ ಆಡಿ ಅಥವಾ ಬೇಲಿಯಿಂದ ಮೃತಪಟ್ಟಿವೆ ಎಂಬುದು ಅಧಿಕೃತ ವರದಿಯಿಂದ ಗೊತ್ತಾಗುತ್ತದೆ. ಈ ಕುರಿತು ಸೋಲಾರ್‌ ಕಂಪನಿ ಹಾಗೂ ಕಂಪನಿ ನಿರ್ವಹಣೆ ಮಾಡುವ ಅಮೀತ ಸಿಂಗ್‌, ಪ್ರತೀಕ ಎಂಬುವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1972ರ 9, 39, 51ರಡಿ ಪ್ರಕರಣ ದಾಖಲಿಸಲಾಗಿದೆ. ಇದು ಜಾಮೀನು ರಹಿತ ಪ್ರಕರಣವಾಗಿದೆ. ಸಣ್ಣ ಶಬ್ಧಕ್ಕೂ ತೀವ್ರ ರೀತಿಯಲ್ಲಿ ಸ್ಪಂದಿಸುವ ಸೂಕ್ಷ್ಮ ಗ್ರಹಣಾ ಶಕ್ತಿ ಹೊಂದಿರುವ ಕೃಷ್ಣಮಗಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ. ಅಳಿವಿನಂಚಿನಲ್ಲಿರುವ ಕೃಷ್ಣ ಮೃಗ ಸಂತತಿ ಉಳಿವಿಗಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ.
 ಬಸವರಾಜ ದಂಡೆ, ಅರಣ್ಯ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next