Advertisement

ಮೈತ್ರಿ ಲಾಭ ಎರಡೂ ಪಕ್ಷಗಳಿಗೂ ಸಿಗಬೇಕು

09:36 PM Mar 23, 2019 | Team Udayavani |

ಮೈಸೂರು: ಮೈತ್ರಿ ಧರ್ಮ ಪಾಲನೆಯ ಲಾಭ ಎರಡೂ ಪಕ್ಷಗಳಿಗೂ ಸಿಗಬೇಕು. ಫ‌ಲಿತಾಂಶದಲ್ಲಿ ಲಾಭ ಸಿಗದಿದ್ದರೆ ಮೈತ್ರಿ ಪ್ರಯೋಜನವಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅಭಿಪ್ರಾಯಪಟ್ಟರು.

Advertisement

ಮೈಸೂರಿನಲ್ಲಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲ ಕೋರಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಒಂದಾಗಿದ್ದರೂ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ.

ಹೀಗಾಗಿ ಎರಡೂ ಪಕ್ಷಗಳ ನಾಯಕರು ಒಂದಾದಂತೆ, ಸ್ಥಳೀಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಕೂಡ ಒಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಚಿವ ಸಾ.ರಾ.ಮಹೇಶ್‌ ಜೊತೆಗೆ ಮಾತನಾಡಿದ್ದೇನೆ. ಎರಡೂ ಪಕ್ಷಗಳಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ನಾವು ಅವಕಾಶ ಕೊಡುವುದಿಲ್ಲ ಎಂದರು.

ರಾಜ್ಯದಲ್ಲಿ 9 ತಿಂಗಳಿಂದ ಮೈತ್ರಿ ಸರ್ಕಾರ ಇದೆ. ಇದೇ ರೀತಿಯಲ್ಲಿ ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಿ ದೇಶದ ಆಡಳಿತವನ್ನು ಹಿಡಿಯಬೇಕಿದೆ ಎಂದ ಅವರು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ರಾಜ್ಯದಲ್ಲಿ 20 ಸ್ಥಾನ ಗೆಲ್ಲಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಅದರಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಕೂಡ ಸೇರಿದೆ ಎಂದು ಹೇಳಿದರು.

ಚುನಾವಣೆ ಸಂಬಂಧ ಮೈಸೂರಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿ ಸಮಾವೇಶ ನಡೆಯಲಿದೆ. ಈ ಸಭೆಗೆ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬರುತ್ತಾರೆ. ಸಿದ್ದರಾಮಯ್ಯ ಅವರು ಜೆಡಿಎಸ್‌ ನಾಯಕರನ್ನು ಕರೆತರುವ ಭರವಸೆ ನೀಡಿದ್ದಾರೆ. ಮೈಸೂರಿನ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಅಧ್ಯಕ್ಷ ಆರ್‌.ಮೂರ್ತಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಸಿ.ಎಚ್‌.ವಿಜಯಶಂಕರ್‌ ಜೊತೆಗೆ ಸಚಿವ ಸಾ.ರಾ.ಮಹೇಶ್‌ ಮನೆಗೆ ಭೇಟಿ ನೀಡಿದ್ದರು. 

ಟಿಕೆಟ್‌ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದ ಸಿಎಚ್‌ವಿ
ಮೈಸೂರು:
ಅಧಿಕೃತವಾಗಿ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗುವ ಮುನ್ನವೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ಪಕ್ಷದ ಸಂಭಾವ್ಯ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಆರಂಭದಲ್ಲಿ ಮಾಜಿ ಶಾಸಕ ವಾಸು, ಎಐಸಿಸಿ ಮುಖಂಡ ಸೂರಜ್‌ ಹೆಗಡೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಸೇರಿದಂತೆ ಹಲವರು ಟಿಕೆಟ್‌ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿದ್ದ ಸಿ.ಎಚ್‌.ವಿಜಯಶಂಕರ್‌ ಅವರನ್ನು ಲೋಕಸಭಾ ಚುನಾವಣೆಯ ಟಿಕೆಟ್‌ ಭರವಸೆಯೊಂದಿಗೆ ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದಿರುವುದರಿಂದ ಅಂತಿಮವಾಗಿ ಕೇಂದ್ರ ಚುನಾವಣಾ ಸಮಿತಿಗೆ ವಿಜಯಶಂಕರ್‌ ಒಬ್ಬರ ಹೆಸರನ್ನೇ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪ್ರಮುಖ ಮುಖಂಡರ ಭೇಟಿ, ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಂಡಿರುವ ವಿಜಯಶಂಕರ್‌, ಇದೀಗ ದೋಸ್ತಿ ಪಕ್ಷ ಜೆಡಿಎಸ್‌ ಬೆಂಬಲ ಕೋರಲು ಶುಕ್ರವಾರ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಅವರನ್ನು ಭೇಟಿ ಮಾಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next