Advertisement

ಮೈತ್ರಿ ಸರ್ಕಾರ ಖಂಡಿಸಿ ಬಿಜೆಪಿಯಿಂದ ಕರಾಳ ದಿನ ಆಚರಣೆ

04:16 PM May 24, 2018 | Team Udayavani |

ರಾಮನಗರ: ಜನರ ತೀರ್ಪಿಗೆ ವಿರುದ್ಧವಾಗಿ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಕರಾಳ ದಿನಾಚರಣೆ ಆಚರಿಸಿದರು.

Advertisement

ನಗರದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ತೋಳು ಮತ್ತು ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಜೆಡಿಎಸ್‌ ಮತ್ತು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ವಿರೋದಾಭಾಸಗಳ ನಡುವೆ ಅಧಿಕಾರ ದಾಹದಿಂದ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿವೆ ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್‌ನ ದುರಾಡಳಿತದಿಂದ ಬೇಸೆತ್ತ ಜನತೆ ಕಾಂಗ್ರೆಸ್‌ ವಿರುದ್ಧ ಸಿಡಿದಿದ್ದಾರೆ. 122 ಸ್ಥಾನಗಳಲ್ಲಿದ್ದ ಕಾಂಗ್ರೆಸ್‌ 78ಕ್ಕೆ ಕುಸಿದಿದೆ. 40 ಕ್ಷೇತ್ರಗಳಲ್ಲಿದ್ದ ಜೆಡಿಎಸ್‌ 37 ಕ್ಷೇತ್ರಗಳಲ್ಲಿ ಮಾತ್ರ ಯಶಸ್ಸು ಕಾಣಿಸಿದೆ. ಆದರೆ ಕೇವಲ 40 ಕ್ಷೇತ್ರಗಳಲ್ಲಿದ್ದ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಈ ಅಂಕಿ ಅಂಶಗಳು ರಾಜ್ಯದ ಜನತೆಗೆ ತಮ್ಮ ಪಕ್ಷದ ಬಗ್ಗೆ ಇಟ್ಟಿರುವ ವಿಶ್ವಾಸ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. 

ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಜನಪರ ಯೋಜನೆಗಳು, ಮಹತ್ವ ಪೂರ್ಣ
ಕಾರ್ಯಕ್ರಮಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರ ಚಿಂತನೆಗಳು, ರೈತಪರ ಕಾಳಜಿಗೆ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದರು.

Advertisement

ಚುನಾವಣಾ ಪೂರ್ವದಲ್ಲಿ ಜೆಡಿಎಸ್‌ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರನ್ನು ಏಕವಚನದಲ್ಲಿ ನಿಂದಿಸಿದ್ದರು. ಆದರೆ ಇದೀಗ ಅವರೇ ದೇವೇಗೌಡರ ಮನೆಗೆ ತೆರಳಿ ಜೆಡಿಎಸ್‌
ಸರ್ಕಾರದ ರಚನೆಗೆ ಕೈಚಾಚಿದ್ದಾರೆ. ಅನೈತಿಕ ರಾಜಕಾರಣಕ್ಕೆ ಇಬ್ಬರೂ ನಾಯಕರು ಮುಂದಾಗಿದ್ದಾರೆ. ಎರಡೂ ಪಕ್ಷಗಳಿಗೆ ಮಾನಾ ಮರ್ಯಾದೆ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಈ ಸರ್ಕಾರ ಹೆಚ್ಚು ದಿನ ಬಾಳೊಲ್ಲ,
ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಎರಡೂ ಪಕ್ಷಗಳಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಲಿವೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ರುದ್ರದೇವರು, ತಾಲೂಕು ಅಧ್ಯಕ್ಷ ಪ್ರವೀಣ್‌ ಗೌಡ, ಮುಖಂಡರಾದ ಎಸ್‌.ಆರ್‌.ನಾಗರಾಜು, ಜಿ.ವಿ.ಪದ್ಮನಾಭ, ಪಿ.ವಿ.ಬದರೀನಾಥ್‌, ಚಂದ್ರಶೇಖರ್‌ ರೆಡ್ಡಿ, ರಮೇಶ್‌, ವಿನೋದ್‌, ಚನ್ನಪ್ಪ, ಬಮ್ಮಣ್ಣ, ರಾಜಣ್ಣ, ಗುಲಾಬ್‌ ಜಾನ್‌ ಮತ್ತಿತರರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next