Advertisement

ಪ್ರಸಕ್ತ ವರ್ಷ ವಿಮಾನಯಾನ ಅನುಮಾನ

11:18 AM Oct 26, 2018 | Team Udayavani |

ಬೀದರ: ನಗರ ಹೊರವಲಯದ ಚಿದ್ರಿ ಸಮೀಪದ ವಾಯು ನೆಲೆ ತರಬೇತಿ ಕೇಂದ್ರದಲ್ಲಿ ಈವರೆಗೆ ಪ್ರಾರಂಭಗೊಳ್ಳಬೇಕಾದ ನಾಗರಿಕ ವಿಮಾನಯಾನ ಸೇವೆ ಈ ವರ್ಷದಲ್ಲಿ ಶುರು ಆಗುವುದು ಬಹುತೇಕ ಅನುಮಾನ.

Advertisement

ಲೋಕಸಭೆ ಚುನಾವಣೆಗೂ ಮುನ್ನ ಬೀದರ್‌ ನಗರದಲ್ಲಿ ಸಾರ್ವಜನಿಕ ವಿಮಾನಯಾನ ಪ್ರಾರಂಭಗೊಳ್ಳುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಧ್ಯ ಸಮನ್ವಯದ ಕೊರತೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. 

ವಿಮಾನಯಾನ ಕುರಿತು ರಾಜಕಾರಣಿಗಳು ಸುಳ್ಳು ಹೇಳಿ ದಿನ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಚುನಾಯಿತ ಜನ ಪ್ರತಿನಿಧಿಗಳು ಕೂಡ ವರ್ತಿಸುತ್ತಿದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮುಂದಿನ ಮೂರು ತಿಂಗಳಲ್ಲಿ ಬೀದರ್‌ ನಗರದಿಂದ ನಾಗರಿಕ ವಿಮಾನಯಾನ ಪ್ರಾರಂಭಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಅದೇ ತಿಂಗಳಲ್ಲಿ ಸಂಸದ ಭಗವಂತ ಖೂಬಾ ಕೂಡ ಹೇಳಿಕೆ ನೀಡಿ, ಮೂರು ತಿಂಗಳಲ್ಲಿ ಇಲ್ಲಿಂದ ವಿಮಾನ ಹಾರಾಟ ಮಾಡುತ್ತವೆ.
ಈ ಭಾಗದ ಜನರಿಗೆ ವಿಮಾನ ಸೇವೆ ದೊರೆಯಲಿದೆ ಎಂದು ಹೇಳಿಕೆ ನೀಡಿದ್ದರು.

ಸದ್ಯ ಇಬ್ಬರು ನಾಯಕರು ಹೇಳಿಕೆ ನೀಡಿ ನಾಲ್ಕು ತಿಂಗಳು ಕಳೆದರೂ ಕೂಡ ಇಂದಿಗೂ ಯಾವುದೇ ಕೆಲಸಗಳು ವಾಯು ನೆಲೆಯಲ್ಲಿ ನಡೆಯುತ್ತಿಲ್ಲ. ಪಾಳುಬಿದ್ದ ಕಟ್ಟಡದಲ್ಲಿ ಯಾವುದೇ ದುರಸ್ಥಿಗಳು ಕೂಡ ನಡೆಯದಿರುವುದು ರಾಜಕಾರಣಿಗಳು ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಸಂಸದ ಭಗವಂತ ಖೂಬಾ ಅವರನ್ನು ವಿಚಾರಿಸಿದಾಗ, ಮುಂದಿನ ಜನವರಿ (2019) ವರೆಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ವಿಮಾನಯಾನ ಶುರು ಆಗಲಿದೆ.

ಈ ಕುರಿತು ಮುಂದಿನ 15 ದಿನಗಳಲ್ಲಿ ಸುದ್ದಿಗೋಷ್ಠಿ ಕರೆದು ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಜಿಲ್ಲೆಯ ಯಾವ ರಾಜಕಾರಣಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿ ವಿಮಾನಯಾನ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದು, ವಿಮಾನಯಾನ ಪ್ರಾರಂಭಿಸುವ ನಿಟ್ಟಿನಲ್ಲಿ ಕೂಡ ರಾಜಕೀಯ ಮಾಡಲಾಗುತ್ತಿದೆಯೇ ಎಂಬ ಅನುಮಾನ ಜನರನ್ನು ಕಾಡುವಂತೆ ಮಾಡಿದೆ.

Advertisement

ಒಂದು ದಶಕದಿಂದ ವಿಮಾನ ಯಾನ ಕಾಮಗಾರಿ ಪ್ರಕ್ರಿಯೆಗಳು ನಡೆಯುತ್ತಿವೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಹೊಸ ನಿಲ್ದಾಣ ತಯಾರಿಸಿ ಈಗಾಗಲೇ ಪ್ರಾಯೋಗಿಕ ವಿಮಾನ ಹಾರಾಟ ನಡೆದಿದ್ದು, ಮುಂದಿನ ಕೆಲ ತಿಂಗಳಲ್ಲಿ ಸಾರ್ವಜನಿಕರ ಸೇವೆ ಪ್ರಾರಂಭಗೊಳ್ಳಲಿದೆ. ಆದರೆ, ಬೀದರ್‌
ನಗರದಲ್ಲಿ ವಾಯು ನೆಲೆ ತರಬೇತಿ ಕೇಂದ್ರ ಇದ್ದು, ಇಲ್ಲಿ ವಿಮಾನಗಳ ಹಾರಾಟ ಪ್ರತಿನಿತ್ಯ ನಡೆಯುತ್ತಿವೆ.

ಈಗಾಗಲೇ ಇಲ್ಲಿ ರನ್‌ ವೇ ಇದ್ದು, ವಿಮಾನ ಹಾರಾಟಕ್ಕೆ ಯಾವುದೇ ಸಮಸ್ಯೆಗಳು ಇಲ್ಲಿ ಇಲ್ಲ. ಆದರೆ, ನಾಗರಿಕ ವಿಮಾನಯಾನದ ಟರ್ಮಿನಲ್‌ ದುರಸ್ಥಿ ಕಾರ್ಯ, ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸೇರಿದಂತೆ ಇತರೆ ಪ್ರಮುಖ ಕಾಮಗಾರಿಗಳು ಬಾಕಿ ಇದ್ದು, ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿದರೆ, ಕೆಲ ತಿಂಗಳಲ್ಲಿಯೇ ಬೀದರ್‌ದಿಂದ ಕೂಡ ನಾಗರಿಕ ವಿಮಾನ ಹಾರಾಟ ಶುರು ಆಗಬಹುದು ಎಂಬುದು ಇಲ್ಲಿನ ಜನರ ಅನಿಸಿಕೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next