Advertisement

ಬಿಎಂಟಿಸಿಗೆ ತಟ್ಟಿದ ಜಾಹಿರಾತು ತೆರವು ಬಿಸಿ

12:18 PM Nov 11, 2018 | Team Udayavani |

ಬೆಂಗಳೂರು: ಈಗಾಗಲೇ ನಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಜಾಹಿರಾತು ಫ‌ಲಕಗಳ ತೆರವಿನಿಂದ ಇದುವರೆಗೆ ಸುಮಾರು ಒಂದು ಕೋಟಿ ರೂ. ಆದಾಯ ಖೋತಾ ಆಗಿದ್ದು, ಜಾಹಿರಾತು ಬೈಲಾ ವಿಳಂಬವಾಗಲಿರುವುದರಿಂದ ಈ ನಷ್ಟದ ಬಾಬ್ತು ಮತ್ತಷ್ಟು ಹೆಚ್ಚಲಿದೆ.

Advertisement

ಬಸ್‌ ನಿಲ್ದಾಣಗಳಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ ಮತ್ತು ಹೋರ್ಡಿಂಗ್‌ಗಳಿಂದ ಈ ಹಿಂದೆ ಬಿಎಂಟಿಸಿಗೆ ನಿತ್ಯ ಒಂದರಿಂದ ಒಂದೂವರೆ ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ, ಹೈಕೋರ್ಟ್‌ ಸೂಚನೆ ಮೇರೆಗೆ ಬಿಬಿಎಂಪಿ ಎಲ್ಲ ಪ್ರಕಾರ ಜಾಹಿರಾತುಗಳ ತೆರವುಗೊಳಿಸಿದ್ದರಿಂದ ಅದಕ್ಕೆ ಸಂಪೂರ್ಣ ಕತ್ತರಿ ಬಿದ್ದಿದೆ.

ಪರಿಣಾಮ ಆಗಸ್ಟ್‌ನಿಂದ ಈವರೆಗೆ ಅಂದಾಜು ಒಂದು ಕೋಟಿಗೂ ಅಧಿಕ ಆದಾಯ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ. ಈ ಆರ್ಥಿಕ ನಷ್ಟ ಸರಿದೂಗಿಸಲು ಸದ್ಯ ಪರ್ಯಾಯ ಮಾರ್ಗಗಳೂ ಇಲ್ಲದ್ದರಿಂದ ಬಿಬಿಎಂಪಿಯ ಹೊಸ ಜಾಹಿರಾತು ಬೈಲಾ ಅನ್ನು ಬಿಎಂಟಿಸಿ ಎದುರುನೋಡುತ್ತಿದೆ.

ಒಟ್ಟು 2ಕೋಟಿ ಆದಾಯ: ಒಟ್ಟಾರೆ ತಿಂಗಳಿಗೆ ಎರಡು ಕೋಟಿ ರೂ.ಗಳಷ್ಟು ಆದಾಯ ಜಾಹಿರಾತು ಮೂಲದಿಂದ ಬರುತ್ತದೆ. ಇದರಲ್ಲಿ 32 ಲಕ್ಷ ರೂ. ವೋಲ್ವೊ ಬಸ್‌ಗಳದ್ದು ಸೇರಿದಂತೆ ಒಟ್ಟಾರೆ 5 ಸಾವಿರ ಬಸ್‌ಗಳ ಮೇಲೆ ಅಳವಡಿಸಿದ ಜಾಹಿರಾತಿನಿಂದ 1.6 ಕೋಟಿ ರೂ. ಇನ್ನು ಹಬ್ಬದ ಸೀಜನ್‌ನಲ್ಲಿ ನಿಲ್ದಾಣಗಳಲ್ಲಿ ಅಳವಡಿಸಿದ ಜಾಹಿರಾತುಗಳಿಂದ ಆದಾಯ 5ರಿಂದ 8 ಲಕ್ಷ ಹೆಚ್ಚಳ ಆಗುತ್ತದೆ.

ಆಗಸ್ಟ್‌-ನವೆಂಬರ್‌ ನಡುವೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಬಂದುಹೋದವು. ಆದರೆ, ಇದೇ ವೇಳೆ ಜಾಹೀರಾತು ನಿಷೇಧದಿಂದ ಸಹಜವಾಗಿ ಹೆಚ್ಚು ನಷ್ಟವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಬಿಬಿಎಂಪಿ ನಿಯಮದ ಪ್ರಕಾರ 24×12, 15×30, 40×20 ಅಡಿ ಎಂದು ಮೂರು ಮಾದರಿಯ ಜಾಹಿರಾತು ಫ‌ಲಕಗಳನ್ನು ಅಳವಡಿಸಲು ಅವಕಾಶ ಕಲ್ಪಿಸಿದೆ. ನಿಲ್ದಾಣಗಳು ಯಾವ ಪ್ರದೇಶದಲ್ಲಿವೆ ಎಂಬುದರ ಮೇಲೆ ಜಾಹಿರಾತು ದರ ನಿಗದಿಯಾಗಿರುತ್ತದೆ.

ನಗರದಲ್ಲಿ ನೂರಾರು ಬಸ್‌ ನಿಲ್ದಾಣಗಳಿದ್ದರೂ, ಅದರಲ್ಲಿ ಪ್ರಮುಖವಾಗಿ ನಿಗಮದ ಸುಪರ್ದಿಯಲ್ಲಿರುವುದು ಕೇವಲ 15 ನಿಲ್ದಾಣಗಳು. ಇವುಗಳಿಂದ ತಿಂಗಳಿಗೆ 40 ಲಕ್ಷ ರೂ. ಆದಾಯ ಬರುತ್ತಿತ್ತು. ಅದರಲ್ಲಿ ಅರ್ಧದಷ್ಟು ಆದಾಯ ಕೇವಲ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ, ಶಾಂತಿನಗರ, ಜಯನಗರ, ಯಶವಂತಪುರ ಬಸ್‌ ನಿಲ್ದಾಣಗಳಿಂದ ಹರಿದುಬರುತ್ತಿತ್ತು. ಈಗ ಅದೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ.

ಈ ನಷ್ಟವನ್ನು ಸರಿದೂಗಿಸಲು ಪರ್ಯಾಯ ಆರ್ಥಿಕ ಮೂಲಗಳ ಹುಡುಕಾಟ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಜಾಹಿರಾತು ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಬಸ್‌ ನಿಲ್ದಾಣಗಳಲ್ಲಿ ಅಳವಡಿಸಿದ ಜಾಹಿರಾತುಗಳು ಅಧಿಕೃತವಾಗಿಯೇ ಇದ್ದವು.

ಸಾಮಾನ್ಯ ಟೆಂಡರ್‌ ಕರೆದು, ಪಾಲಿಕೆಯಲ್ಲಿ ನೋಂದಣಿ ಮಾಡಿಸಿಕೊಂಡ ಹಾಗೂ ತೆರಿಗೆ ಪಾವತಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ನ್ಯಾಯಾಲಯವು ಫ್ಲೆಕ್ಸ್‌ ನಿಷೇಧ ಹಾಗೂ ಸರ್ಕಾರವು ಪ್ಲಾಸ್ಟಿಕ್‌ ನಿಷೇಧ ಮಾಡಿದ್ದರಿಂದ ತೆರವುಗೊಳಿಸಲಾಗಿದೆ. ಬಿಬಿಎಂಪಿ ಹೊಸ ಜಾಹಿರಾತು ಬೈಲಾ ಜಾರಿಗೊಳಿಸಿದ ನಂತರ ಜಾಹಿರಾತು ಅಳವಡಿಕೆಗೆ ಪುನಃ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.

ನಷ್ಟದ ಜತೆ ಎಫ್ಐಆರ್‌ ದಾಖಲು!: ಆದಾಯ ಖೋತಾ ಜತೆಗೆ ಬಿಎಂಟಿಸಿ ವಿರುದ್ಧ ಎಫ್ಐಆರ್‌ ಕೂಡ ದಾಖಲಾಗಿದೆ. ಇದು ಮತ್ತೂಂದು ತಲೆನೋವಾಗಿ ಪರಿಣಮಿಸಿದೆ. ಜಾಹಿರಾತು ತೆರವುಗೊಳಿಸದವರ ಹಾಗೂ ಅನಧಿಕೃತ ಜಾಹಿರಾತು ಅಳವಡಿಸಿದವರ ವಿರುದ್ಧ ಹೈಕೋರ್ಟ್‌ ಸೂಚನೆಯಂತೆ ಬಿಬಿಎಂಪಿಯು ಎಫ್ಐಆರ್‌ ದಾಖಲಿಸಿದೆ. ಅಂತಹವರ ಪಟ್ಟಿಯಲ್ಲಿ ಬಿಎಂಟಿಸಿಯನ್ನೂ ಸೇರಿಸಲಾಗಿದೆ. ಫ್ಲೆಕ್ಸ್‌ಗಳ ತೆರವಿಗೆ ಬಿಬಿಎಂಪಿ ನೋಟಿಸ್‌ ನೀಡಿತ್ತು.

ನಂತರ ಸ್ವತಃ ಪಾಲಿಕೆ ಸಿಬ್ಬಂದಿ ತೆಗೆದುಹಾಕಿದ್ದಾರೆ. ಆದರೆ, ಯಾವುದೇ ಜಾಹಿರಾತುಗಳು ಅನಧಿಕೃತವಾಗಿರಲಿಲ್ಲ ಎಂದು ನಿಗಮವು ಸ್ಪಷ್ಟಪಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ಭಾಸ್ಕರ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸರ್ಕಾರದ ಇಲಾಖೆ/ ನಿಗಮ/ ಮಂಡಳಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಕೂಡ ಪ್ರಸ್ತಾಪವಾಗಿದ್ದು, ಮುಖ್ಯ ಕಾರ್ಯದರ್ಶಿಗಳು ಪಾಲಿಕೆ ಆಯುಕ್ತರಿಗೆ ಎಫ್ಐಆರ್‌ ಹಿಂಪಡೆಯಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾಹಿರಾತು ತೆರವಿನಿಂದ ನಿಗಮದ ಆದಾಯದಲ್ಲಿ ಖೋತಾ ಆಗಿದೆ. ಇದನ್ನು ಸರಿದೂಗಿಸಲು ಪರ್ಯಾಯ ಆರ್ಥಿಕ ಮೂಲಗಳನ್ನು ಹುಡುಕುತ್ತಿದ್ದೇವೆ. ಇದರೊಂದಿಗೆ ಹೊಸ ಬೈಲಾ ಬಂದ ನಂತರ ಅದರಲ್ಲಿನ ನಿಯಮದ ಪ್ರಕಾರ ಮತ್ತೆ ಫ್ಲೆಕ್ಸ್‌ ಅಳವಡಿಸಲಾಗುವುದು. ಬಿಎಂಟಿಸಿ ಮೇಲೆ ಎಫ್ಐಆರ್‌ ಕೂಡ ದಾಖಲಾಗಿದ್ದು, ಹಿಂಪಡೆಯುವಂತೆಯೂ ಮನವಿ ಮಾಡಲಾಗಿದೆ. ಇದಕ್ಕೆ ಪೂರಕ ಸ್ಪಂದನೆಯೂ ಸಿಕ್ಕಿದೆ.
-ವಿ. ಪೊನ್ನುರಾಜ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next