Advertisement
ಚಿದಾನಂದಮೂರ್ತಿ ಅವರೊಡನೆ ಸಂಶೋಧನೆಗೆ ಹೊರಡುವುದೆಂದರೇ ಒಂದು ಹಬ್ಬ. ತಮ್ಮ ಶಿಷ್ಯರೊಡನೆ ಅವರು ನಡೆಸಿರುವ ಸಂಶೋಧನಾ ಪ್ರವಾಸಗಳು ಮತ್ತು ನೀಡಿರುವ ದಾರಿಬುತ್ತಿ ದೀರ್ಘಕಾಲ ಬುದ್ಧಿಗೆ ಗ್ರಾಸವಾಗುಳಿದಿರುತ್ತವೆ. ಚಿಂತನೆಗೆ ಅವಕಾಶ ಕಲ್ಪಿಸುತ್ತವೆ. ಇತಿಹಾಸವನ್ನು ವರ್ತಮಾನದ ಜೊತೆಗೆ ಬೆಸೆಯುವ ಕೆಲಸದಿಂದ ಸಿಗುವ ಸಂತೋಷ ವರ್ಣನಾತೀತ. ಪಾಂಡಿತ್ಯರಸಕ್ಕೆ ಅದೊಂದು ಉದಾಹರಣೆ.
Related Articles
Advertisement
ಪಂಪನ ತಾಯಿಯ ವಂಶಸ್ಥರನ್ನೂ ಅಣ್ಣಿಗೆರೆಯಲ್ಲೇ ಗುರುತಿಸಿದ್ದರು. ಅವರ ಈಗಿನ ಕುಟುಂಬನಾಮ ಜೋಶಿ. ಅದೇ ಹಿಂದೆ ಜೋಯಿಸ ಆಗಿತ್ತು. ಆ ವಂಶದ ಭೀಮಪ್ಪಯ್ಯ ಜೋಶಿಯವರನ್ನು ಚಿಮೂ ಕಂಡಿದ್ದರು. ಹಲವು ಬದಲಾವಣೆಗಳಾಗಿದ್ದರೂ ಅವರೆಲ್ಲರೂ ತಮ್ಮ ಹೆಸರುಗಳಲ್ಲಿ ಹಿರಿಯರ ಹೆಸರುಗಳನ್ನು ಒಂದಲ್ಲ ಒಂದು ಸ್ವರೂಪದಲ್ಲಿ ಉಳಿಸಿಕೊಂಡಿದ್ದಾರೆ. ಕಲ್ಯಾಣ ಚಾಲುಕ್ಯ ವಂಶದ 6ನೇ ವಿಕ್ರಮಾದಿತ್ಯ, ಉತ್ತರ ಭಾರತದ ಹಲವು ಪ್ರದೇಶಗಳ ಮೇಲೂ ವಿಜಯ ಸಾಧಿಸಿದ್ದ.
ಹಾಗೆ ಗೆದ್ದ ಬಿಹಾರ ಪ್ರದೇಶಕ್ಕೆ ತನ್ನ ಪ್ರತಿನಿಧಿಯನ್ನಾಗಿ ನಾನ್ಯದೇವನನ್ನು ನೇಮಿಸಿದ್ದ. ಈ ನಾನ್ಯದೇವನೇ ಬಿಹಾರದ ಉತ್ತರ ಮತ್ತು ನೇಪಾಳದ ದಕ್ಷಿಣ ಭಾಗಗಳನ್ನು ಆಳಿದ ಕರ್ನಾಟ ವಂಶದ ಸ್ಥಾಪಕ. ನೇಪಾಳದಲ್ಲಿ ನಾನ್ಯದೇವನ ನೆನಪು ಮಾಡುವ ಹಲವು ಸಾಂಸ್ಕೃತಿಕ ಸಂಗತಿಗಳಿವೆ. ಅಕಸ್ಮಾತ್ತಾಗಿ ಚಿಮೂ ಅವರ ಸಂಪರ್ಕಕ್ಕೆ ಬಂದ ವ್ಯಕಿಯೊಬ್ಬರ ಮೂಲಕ ನೇಪಾಳಿ ಭಾಷೆಯ ತಾಮ್ರಶಾಸನವೊಂದರ ಕೊನೆಯಲ್ಲಿದ್ದ ಕನ್ನಡ ಅಕ್ಷರಗಳು ಮತ್ತು ಭಕ್ತಪುರದ ಜಂಗಂ ಮಠದ ಒರಳುಕಲ್ಲೊಂದರ ಮೇಲಿನ ಕನ್ನಡ ಲಿಪಿಯ ಶಾಸನಗಳು ಕೆರಳಿಸಿದ್ದ ಕುತೂಹಲದಿಂದ ನೇಪಾಳದ ಪ್ರವಾಸವನ್ನೂ ಮಾಡಿದರು.
ಕಠ್ಮಂಡುವಿನ ಶ್ರೀದೇವ್ ವೈದ್ಯರ ಬಳಿ ಇದ್ದ ವಂಶಾವಳಿಯ ಮೂಲಕ ಅವರು ಭಕ್ತಪುರದ ಹರಿವಂಶದೇವನ ವಂಶಸ್ಥರು ಎಂಬುದನ್ನೂ ಪತ್ತೆ ಮಾಡಿದರು. ಕಠ್ಮಂಡುವಿಗೂ ಕರ್ನಾಟಕಕ್ಕೂ ಈಗಲೂ ಸಾಂಸ್ಕೃತಿಕವಾಗಿ ಸಂಬಂಧಗಳು ಉಳಿದಿವೆ. ಭಕ್ತಪುರದ ಜಂಗಂ ಮಠ ಈಗ ಹಾಳುಬಿದ್ದಿದೆ. ಆ ಮಠದ ಒಂದು ಕೊಠಡಿಯಲ್ಲಿ (ಬಹುತೇಕ ಅಡುಗೆಮನೆ) ಇರುವ ಒರಳುಕಲ್ಲಿನ ಮೇಲಿರುವ ಕನ್ನಡ ಶಾಸನವನ್ನು ನಾನೂ ಖುದ್ದಾಗಿ ನೋಡಿದ ಸಂತೋಷವಿದೆ.
ಬಸವಣ್ಣನವರ ವಂಶೀಕರು ಈಗ ಬಸವನಬಾಗೇವಾಡಿಯ ಓಣಿಯೊಂದರಲ್ಲಿ ವಾಸವಾಗಿರುವುದನ್ನು ಚಿಮೂ 1980ರಲ್ಲಿ ಪತ್ತೆ ಮಾಡಿದ್ದರು. ಆ ಕುಟುಂಬದಲ್ಲಿ ಪ್ರತಿ 2ನೇ ತಲೆಮಾರಿನ ಗಂಡುಮಗುವಿಗೆ “ಮಾದರಸ’ ಎಂಬ ಹೆಸರನ್ನಿಡಲಾಗುತ್ತದೆ. ಅದು ಬಸವಣ್ಣನವರ ತಂದೆಯ ಹೆಸರು. ಆ ಕುಟುಂಬದವರು ಬ್ರಾಹ್ಮಣರು ಮತ್ತು ಈಗ ಅವರ ಕುಟುಂಬನಾಮ ಕುಲಕರ್ಣಿ. ಅವರ ಮನೆಯಲ್ಲಿ ಭಕ್ತರು ಶ್ರೀಶೈಲಕ್ಕೆ ಒಯ್ಯುವ ಕಂಬಿಯನ್ನೂ ಚಿಮೂ ಕಂಡಿದ್ದರು. ಅವರು ಹೋದಾಗ ಕುಟುಂಬದ ವಂಶಸ್ಥರನ್ನೂ ಕಂಡುಬಂದಿದ್ದರು.
ಹರಿಹರ, ರಾಘವಾಂಕ, ಕುಮಾರವ್ಯಾಸ, ರತ್ನಾಕರ ವರ್ಣಿ ಇತ್ಯಾದಿ ಕವಿಗಳ ವಂಶಜರನ್ನೂ ಚಿಮೂ, ಬಹಳ ಶ್ರಮ ವಹಿಸಿ ಪತ್ತೆ ಮಾಡಿದ್ದರು. ವಂಶಸ್ಥರನ್ನು ಗುರುತಿಸುವಾಗ, ಬಹಳ ಸೂಕ್ಷ್ಮಗಳನ್ನು ಅವಲೋಕಿಸಿ, ದಾಖಲೆ ಸಂಗ್ರಹಿಸುತ್ತಿದ್ದರು. ಅದು ಒಬ್ಬ ಯಶಸ್ವಿ ಸಂಶೋಧಕನಲ್ಲಿ ಇರಬೇಕಾದ ಗುಣ.
* ಡಾ. ಎಚ್.ಎಸ್. ಗೋಪಾಲರಾವ್