Advertisement
ಈಗಲೂ ಋತುಗನುಗುಣವಾಗಿ ಮಳೆ ಬರುತ್ತದೆ ಎನ್ನುವುದು ಸಾಧ್ಯವಿಲ್ಲ. ಋತುಮಾನ ಬದಲಿಸುವುದು ಸಾಧ್ಯವಿಲ್ಲ. ಇಡೀ ಜಗತ್ತೇ ಮಾಲಿನ್ಯದಿಂದ ಬಳಲುತ್ತಿದ್ದು, ಹವಾಮಾನ ಬದಲಾವಣೆಗೆ ನಾವೇ ಹೊಂದಿಕೊಳ್ಳುವುದು ಅನಿವಾರ್ಯವಾಗಿದ್ದು, ಕೃಷಿಯಲ್ಲಿ ಪರಿವರ್ತ ನೆಗೆ ಮುಂದಾಗಬೇಕಿದೆ.
Related Articles
Advertisement
ಜಮೀನಿನಲ್ಲಿ ಭತ್ತ ಬೆಳೆದರೂ ಜಮೀನಿನ ಸುತ್ತಮುತ್ತ ಗಿಡಗಳನ್ನು ನೆಡುವುದರಿಂದ ಹಲವು ವರ್ಷಗಳ ಬಳಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಉದಾ: ತೊಗರಿ ಬೆಳೆಯಲ್ಲಿ ಸೋಯಾಬಿನ್ ಹಾಕಬಹುದು. ಮಳೆ ಬಂದರೂ ಕಾಯಿ ಸಿಡಿಯದಿರುವುದರಿಂದ ಅಲ್ಲಿಯೂ ಲಾಭದ ನಿರೀಕ್ಷೆ ಹೊಂದಬಹುದು.
ಒಕ್ಕಲುತನದಲ್ಲಿ ವೈವಿಧ್ಯತೆ ಎಂದರೆ ಕೃಷಿ ಜತೆಗೆ ಕೋಳಿ, ಕುರಿ, ಹೈನುಗಾರಿಕೆ, ಜೇನು ಸಾಕಣೆ ಸೇರಿದಂತೆ ಒಕ್ಕಲುತನಕ್ಕೆ ಸಂಬಂಧಿಸಿದ ಬಹು ವಿಧದ ಕೆಲಸ ಕಾರ್ಯಕ್ಕೆ ಮುಂದಾಗುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಬಹುದು.
ಕನ್ನೇರಿ ಮಠದಲ್ಲಿ ಪ್ರಾಯೋಗಿಕವಾಗಿ ಪ್ರಯೋಗ ಮಾಡಿದ್ದು, ಒಂದು ಎಕರೆಯಲ್ಲಿ ನೂರು ಬೆಳೆ ಹಾಕಿದ್ದೇವೆ. ಸ್ವಲ್ಪ ಜಮೀನು ಇರುವ ವರು ಈ ಪ್ರಯೋಗ ಮಾಡಿ ವೈವಿಧ್ಯಮಯ ಬೆಳೆ ಹಾಕಬಹುದು. ಸರಕಾರ ಕೃಷಿ ಇಲಾಖೆ ಮೂಲಕ ರೈತರ ಜಮೀನುಗಳಲ್ಲಿ ಹಾಗೂ ಜಮೀನಿನ ತಗ್ಗು ಪ್ರದೇಶಗಳಲ್ಲಿ ಲಂಬಾಂತರ ಬಾವಿಗಳನ್ನು ತೆಗೆಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ನೀರು ಬಾವಿಯಲ್ಲಿ ಇಂಗುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಬೋರ್‌ವೆಲ್ ಕೊರೆಸಿದರೂ ಮೂರ್ನಾಲ್ಕು ಇಂಚು ನೀರು ಬೀಳುವುದರಿಂದ ರೈತರು ಪರಿಪೂರ್ಣವಾಗಿ ಕೃಷಿ ಮಾಡಬಹುದು.
ಕೃಷಿ ವಿವಿ ಸಂದರ್ಭಕ್ಕೆ ತಕ್ಕಂತೆ ಸರಕಾರ ಹಾಗೂ ಕೃಷಿ ಇಲಾಖೆಗೆ ಅನೇಕ ಸಂಶೋಧನೆಗಳ ವಾಸ್ತವತೆ, ಸಲಹೆ, ಸೂಚನೆ ನೀಡಿದ್ದು, ಹವಾಮಾನ ವೈಪರೀತ್ಯವಾದಾಗ ಯಾವ ರೀತಿ ಬೆಳೆಗಳಲ್ಲಿ ಪರಿವರ್ತನೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಒಂದು ಪುಸ್ತಕವನ್ನೇ ನೀಡಿದೆ.
ಮಳೆಗಾಲದಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದರೆ ರೈತರು ಸೂಪರ್ ನೇಪಿಯರ್ ಹುಲ್ಲು ಬೆಳೆದರೆ ಎಕರೆಗೆ 70ರಿಂದ 80 ಸಾವಿರ ರೂ. ಗಳಿಸಬಹುದು. ರೈತರು ಒಂದೇ ಬೆಳೆಗೆ ಅಂಟಿಕೊಂಡು ಅದರಲ್ಲೇ ಮುಳುಗಿರುತ್ತಾರೆ. ಕೃಷಿ ಇಲಾಖೆ, ಕೃಷಿ ವಿವಿಗಳಿಗೆ ಭೇಟಿ ನೀಡದಿರುವುದರಿಂದ ಹೊಸ ಹೊಸ ಸಂಶೋಧನೆ, ಯೋಜನೆ, ಸಲಹೆ, ಸೂಚನೆ, ಸಹಾಯಧನ, ಬಿತ್ತನೆ ಬೀಜ, ಬಹು ವೈವಿಧ್ಯತೆಯ ಬೆಳೆಗಳ ಪದ್ಧತಿ ಬಗ್ಗೆ ಅವರಿಗೆ ಮಾಹಿತಿಯೇ ಇರುವುದಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ಜೋಳ ಬಿತ್ತನೆ ಮಾಡುವುದರಿಂದ ಖರ್ಚುವೆಚ್ಚ, ಕೂಲಿ ಆಳುಗಳ ಅಭಾವ ಹಿನ್ನೆಲೆ ಕಲ್ಯಾಣ ಕರ್ನಾಟಕದ ಪ್ರದೇಶಗಳ ರೈತರು ಜೋಳ ಬಿತ್ತನೆ ಕಡಿಮೆ ಮಾಡಿದ್ದಾರೆ. ತೊಗರಿ, ಹತ್ತಿಗೆ ಉತ್ತಮ ಬೆಲೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಸರಕಾರ, ಕೃಷಿ ವಿವಿಗಳು ಆಗಾಗ ಸಲಹೆ ಸೂಚನೆ, ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತವೆ. ಅದರಂತೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.
ರೈತರು ಕೃಷಿಯಲ್ಲಿ ನಷ್ಟದಿಂದ ಹೊರ ಬರಬೇಕಾದರೆ ಜಮೀನುಗಳಲ್ಲಿ ನೀರು ಹರಿದು ಹೋಗುವಂತಿರಬೇಕು. ಚೊಕ್ಕವಾಗಿ ಇಟ್ಟುಕೊಂಡು ಅಭಿವೃದ್ಧಿಪಡಿಸಿಕೊಳ್ಳಬೇಕು. ಹೊಲದ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂದರೆ ದನಗಳನ್ನು ಕಟ್ಟುವುದು, ಸಾಕಣೆ ಮಾಡುವುದಲ್ಲ. ಸೆಣಬು, ಹಸುರು ಎಲೆಗಳ ಗೊಬ್ಬರದಿಂದ, ಕಾಲುಗಾಯಿಗಳಿಂದ 2 ವರ್ಷದಲ್ಲಿ ಭೂಮಿಯನ್ನು ಸದೃಢ ಮಾಡಿಕೊಳ್ಳಬಹುದು. ಆಗ ಒಂದು ಬೆಳೆ ಬದಲು ನಾಲ್ಕೈದು ಬೆಳೆ ಬೆಳೆಯಬಹುದು.
ಪ್ರತಿಯೊಬ್ಬ ರೈತರಿಗೂ 10 ಗುಂಟೆಗಾದರೂ ನೀರು ಲಭ್ಯ ವಾಗುವಂತಾಗಬೇಕು. ಈ ಸಂಬಂಧ 2015ರಲ್ಲಿ ಶ್ರಮ ವಹಿಸಿ ಜಾರಿಗೆ ತಂದ ಕೃಷಿಭಾಗ್ಯ ಯೋಜನೆ ದೇಶಕ್ಕೆ ಮಾದರಿಯಾಯಿತು. ಕೃಷಿಭಾಗ್ಯ ಎಂದರೆ ಜಮೀನಿನಲ್ಲಿ ಸಣ್ಣದಾಗಿ ಬಾವಿ ನಿರ್ಮಾಣ ಮಾಡಿಕೊಳ್ಳುವ ಯೋಜನೆಯಾಗಿತ್ತು. ಪಾಲಿಹೌಸ್, ಕೃಷಿಹೊಂಡ, ಪಂಪ್‌ಸೆಟ್ ಇತ್ಯಾದಿ ನಿರ್ಮಾಣ ಮಾಡಿಕೊಂಡರೆ ತೋಟಗಾರಿಕೆ ಹಾಗೂ ಒಕ್ಕಲುತನ ಕೃಷಿಗೆ ಪ್ರತ್ಯೇಕವಾಗಿ ಸರಕಾರದಿಂದ ಸಹಾಯಧನ ನೀಡುವುದಾಗಿತ್ತು.
2013-14ರಲ್ಲಿ ನಾನು ಕೃಷಿ ಮಿಷನ್ ಅಧ್ಯಕ್ಷನಾಗಿದ್ದಾಗ ಯೋಜನೆ ರೂಪಿಸಿದ್ದು, 2015ರ ಕಾಂಗ್ರೆಸ್ ಸರಕಾರದಲ್ಲಿ ಜಾರಿ ಮಾಡಲಾಗಿತ್ತು. ನಮ್ಮನ್ನು ನೋಡಿ ಮಹಾರಾಷ್ಟ್ರದವರು ಇದನ್ನು ಅಳವಡಿಸಿ ಕೊಂಡರು. ಈಗ ಅದನ್ನು ಕೈಬಿಡಲಾಗಿದೆ.
ಧಾರವಾಡ ಕೃಷಿ ವಿವಿ ಮಾಜಿ ಕುಲಪತಿಯಾಗಿ ಸೇವೆ, 2009ರಿಂದ 14ರ ವರೆಗೆ ಕರ್ನಾಟಕ ಕೃಷಿ ಮಿಷನ್ ಛೇರ್ಮೇನ್ ಆಗಿದ್ದ ವೇಳೆ, ದಿಲ್ಲಿಯಲ್ಲಿರುವ ದೇಶದ ಏಕೈಕ ಇಂಡಿಯನ್ ಅಗ್ರಿಕಲ್ಟರ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕನಾಗಿ ಕಾರ್ಯನಿರ್ವಹಣೆಯ ಹಲವಾರು ಸಂಶೋಧನೆ, ರೈತರಿಗೆ ಅನುಕೂಲವಾಗಲು ಹಲವಾರು ಯೋಜನೆಗಳ ಜಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಸದ್ಯ ರೈತರು ಎದುರಿಸುವ ಸಮಸ್ಯೆ, ತೊಂದರೆ ಹೇಗೆ ನಿವಾರಿಸಬಹುದು ಎನ್ನುವ ಉದ್ದೇಶಕ್ಕಾಗಿ 50, 60 ಎಕರೆ ಪ್ರದೇಶದಲ್ಲಿ ಪ್ರಯೋಗ ಮಾಡಲು ರೀಸರ್ಚ್ ಅಂಡ್ ಸೋರ್ಸ್ ಸೆಂಟರ್ ಫಾರ್ ವೆಲ್‌ಫೇರ್ ಆಫ್ ಫಾರ್ಮರ್ ಸಂಸ್ಥೆ ಪ್ರಾರಂಭದ ಹಂತದಲ್ಲಿದ್ದು, ಈ ಸಂಸ್ಥೆಗೆ ನಾನು ಸಲಹೆಗಾರನಾಗಿದ್ದೇನೆ. ವಿವಿಧೆಡೆ ಪ್ರಾಯೋಗಿಕವಾಗಿ ಹಾಗೂ ಜಾಗೃತಿ ಮೂಡಿಸುತ್ತಿದ್ದೇವೆ. ನಾವು ಮಾಡಿರುವ ಪ್ರಯೋಗದಲ್ಲಿ ರೈತರು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಿದರೂ ಲಾಭ ಗಳಿಸಬಹುದು.
-ಡಾ| ಎಸ್. ಎ.ಪಾಟೀಲ್, ಧಾರಾವಾಡ ಕೃಷಿ ವಿವಿ ನಿವೃತ್ತ ಕುಲಪತಿ