Advertisement

ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ನಡೆಸಬಹುದಾಗಿರುವ ಚಟುವಟಿಕೆಗಳ ವಿವರ

08:23 AM May 02, 2020 | Hari Prasad |

ನವದೆಹಲಿ: ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿ ಮೇ 14ರವರೆಗೆ ವಿಸ್ತರಣೆಗೊಂಡಿದೆ. ಆದರೆ ಈ ಬಾರಿಯ ಲಾಕ್ ಡೌನ್ ಕಳೆದ ಎರಡು ಲಾಕ್ ಡೌನ್ ಗಳಿಗಿಂತ ಸ್ವಲ್ಪ ಭಿನ್ನವಾಗಿರಲಿದೆ.

Advertisement

ಸ್ಥಗಿತಗೊಂಡಿರುವ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸಿ ಆ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಎಲ್ಲಾ ವಲಯಗಳಲ್ಲಿ ಕೆಲವೊಂದು ಸಡಿಲಿಕೆಗಳನ್ನು ನೀಡಿದೆ. ಅವುಗಳ ವಿವರ ಇಲ್ಲಿದೆ.

ಕೆಂಪು ವಲಯ (ರೆಡ್ ಝೋನ್): ಕೆಲವೊಂದು ನಿಬಂಧನೆಗಳೊಂದಿಗೆ ಈ ಎಲ್ಲಾ ಚಟುವಟಿಕೆಗಳಿಗೆ ಅವಕಾಶವಿದೆ. ಅನುಮತಿ ಇರುವ ಚಟುವಟಿಕೆಗಳಿಗೆ ವಾಹನಗಳಲ್ಲಿ ತೆರಳಲು ನೀಡಿರುವ ಅನುಮತಿ ಹೀಗಿದೆ. ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ, ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣಿಸುವಂತಿಲ್ಲ.

ಎಸ್.ಇ.ಝಡ್, ರಫ್ತು ಆಧಾರಿತ ಉದ್ದಿಮೆಗಳು, ಇಂಡಸ್ಟ್ರಿಯಲ್ ಎಸ್ಟೇಟ್ಸ್ ಮತ್ತು ಇಂಡಸ್ಟ್ರಿಯಲ್ ಟೌನ್ ಶಿಪ್ ಗಳು ಸೇರಿದಂತೆ ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಉದ್ದಿಮೆಗಳಲ್ಲಿ ಷರತ್ತುಬದ್ದ ಕಾರ್ಯನಿರ್ವಹಣೆಗೆ ಅವಕಾಶ.

ಇದಕ್ಕೆ ಹೊರತಾಗಿ, ಔಷಧಿ, ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ಉಪಕರಣಗಳು, ಮತ್ತು ಇದಕ್ಕೆ ಸಂಬಂಧಿಸಿದ ಕಚ್ಛಾ ವಸ್ತುಗಳು ಸೇರಿದಂತೆ ಉಪಯುಕ್ತ ವಸ್ತುಗಳ ಉತ್ಪಾದನೆಗೆ ಹಾಗೂ ಐಟಿ ಹಾರ್ಡ್ ವೇರ್, ಸೆಣಬಿನ ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಅವಕಾಶ ಇದೆ. ಆದರೆ ಇಲ್ಲೆಲ್ಲಾ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿರುತ್ತದೆ.

Advertisement

– ಕಾರ್ಯಸ್ಥಳದಲ್ಲಷ್ಟೇ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ಕೆಂಪು ವಲಯದ ನಗರ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ನಡೆಸಲು ಅವಕಾಶ.

– ಶಾಪಿಂಗ್ ಮಾಲ್ ಗಳಲ್ಲಿ, ಮಾರುಕಟ್ಟೆ ಆವರಣಗಳಲ್ಲಿ ಹಾಗೂ ತೆರೆದ ಮಾರುಕಟ್ಟೆ ಪ್ರದೇಶಗಳಲ್ಲಿ ಅವಶ್ಯಕವಲ್ಲದ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲ.

– ಆದರೆ ಇತರೇ ಭಾಗಗಳಲ್ಲಿರುವ ಎಲ್ಲಾ ರೀತಿಯ ಅಂಗಡಿಗಳು, ಅಂಗಡಿ ಸಮೂಹಗಳು ಮತ್ತು ಜನವಸತಿ ಪ್ರದೇಶದಲ್ಲಿರುವ ಅಗಂಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ.

– ಅಗತ್ಯ ವಸ್ತುಗಳ ವಿಚಾರದಲ್ಲಿ ಮಾತ್ರವೇ ಇ-ಕಾಮರ್ಸ್ ಸೇವೆಗಳಿಗೆ ರೆಡ್ ಝೋನ್ ವಿಭಾಗದಲ್ಲಿ ಅವಕಾಶ.

– 33% ಸಿಬ್ಬಂದಿ ಸಾಮರ್ಥ್ಯದೊಂದಿಗೆ ಖಾಸಗಿ ಕಛೇರಿಗಳ ಕಾರ್ಯನಿರ್ವಹಣೆಗೆ ಅವಕಾಶ. ಉಳಿದವರಿಗೆ ವರ್ಕ್ ಫ್ರಂ ಹೋಂ ಸೂಚನೆ.

– ಆದರೆ ಈ 33% ಸಿಬ್ಬಂದಿ ಕಾರ್ಯನಿರ್ವಹಣಾ ನಿರ್ಬಂಧ ರಕ್ಷಣಾ ಹಾಗೂ ಭದ್ರತಾ ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್ ಇಲಾಖೆ, ಜೈಲು ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ, ನಾಗರಿಕ ರಕ್ಷಣಾ ಸಿಬ್ಬಂದಿ, ಅಗ್ನಿ ಶಾಮಕ ಮತ್ತು ತುರ್ತು ಸೇವಾ ಇಲಾಖೆಗಳ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ.

– ಇದರೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (NIC), ಕಸ್ಟಮ್ಸ್, ಭಾರತೀಯ ಆಹಾರ ನಿಗಮ, ಎನ್.ಸಿ.ಸಿ., ನೆಹರೂ ಯುವಕ ಕೇಂದ್ರ ಮತ್ತು ಮುನ್ಸಿಪಲ್ ಸೇವೆಗಳು ಯಥಾಪ್ರಕಾರ ಅಬಾಧಿತವಾಗಿ ಕಾರ್ಯನಿರ್ವಹಿಸಲಿವೆ.

– ಇನ್ನು ರೆಡ್ ಝೋನ್ ಗಳ ಗ್ರಾಮೀಣ ಭಾಗಗಳಲ್ಲೂ ಹಲವಾರು ಚಟುವಟಿಕೆಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿನ ಕೆಲಸಗಳು, ಆಹಾರ ಸಂಸ್ಕರಣಾ ಕೆಲಸಗಳು ಮತ್ತು ಇಟ್ಟಿಗೆ ನಿರ್ಮಾಣ ಕಾಮಗಾರಿಗಳನ್ನು ನಡೆಸಬಹುದಾಗಿರುತ್ತದೆ.

– ಇನ್ನು ಗ್ರಾಮೀಣ ಪ್ರದೇಶಗಳಲ್ಲೂ ಸಹ ಮಾಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

– ಎಲ್ಲಾ ರೀತಿಯ ಕೃಷಿ ಕಾರ್ಯಗಳು, ಹೈನುಗಾರಿಕೆ, ಮೀನುಗಾರಿಕೆ ಚಟುವಟಿಕೆಗಳಿಗೆ ಹಾಗೂ ಪ್ಲಾಂಟೇಶನ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.

– ಆಯುಷ್ ಸಹಿತ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ.

– ಬ್ಯಾಂಕ್ ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಿಮೆ ಮತ್ತು ಕ್ಯಾಪಿಟಲ್ ಮಾರ್ಕೆಟ್ ಚಟುವಟಿಕೆಗಳು ಹಾಗೂ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿಗಳು ಇನ್ನು ಮುಂದೆ ಕಾರ್ಯನಿರ್ವಹಿಸಲಿವೆ.

– ಬಾಲ ಮಂದಿರಗಳು, ಹಿರಿಯ ನಾಗರಿಕರು, ಮಹಿಳಾ, ವಿಧವಾ ಆಶ್ರಮಗಳು ಮತ್ತು ಅಂಗನವಾಡಿಗಳನ್ನು ತೆರೆಯಲು ಅನುಮತಿ ಇರುತ್ತದೆ.

– ಕೊರಿಯರ್ ಹಾಗೂ ಅಂಚೆ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.

– ಇನ್ನು ಕೆಂಪು ವಲಯ ಪ್ರದೇಶಗಳಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ, ಐಟಿ ಹಾಗೂ ಐಟಿ ಸಂಬಂಧಿತ ಸೇವೆಗಳು, ಡಾಟಾ ಮತ್ತು ಕಾಲ್ ಸೆಂಟರ್ ಗಳು, ಕೋಲ್ಡ್ ಸ್ಟೋರೇಜ್ ಹಾಗೂ ಗೋದಾಮು ಸೇವೆಗಳ ಪ್ರಾರಂಭಕ್ಕೆ ಅವಕಾಶ ನೀಡಲಾಗಿದೆ.

ಕಿತ್ತಳೆ ವಲಯದಲ್ಲಿ (ಆರೆಂಜ್ ಝೋನ್):

– ಕೆಂಪು ವಲಯದಲ್ಲಿ ಅನುಮತಿ ನೀಡಲಾಗಿರುವ ಎಲ್ಲಾ ಚಟುವಟಿಕೆಗಳ ಜೊತೆಗೆ ಚಾಲಕ ಸಹಿತ ಒಬ್ಬ ಪ್ರಯಾಣಿಕನಿಗೆ ಅವಕಾಶ ಇರುವಂತೆ ಕ್ಯಾಬ್ ಸೇವೆಗಳಿಗೆ ಅನುಮತಿ.

– ಅನುಮತಿ ಇರುವ ಸೇವೆಗಳಿಗಾಗಿ ವ್ಯಕ್ತಿಗಳ ಹಾಗೂ ವಾಹನಗಳ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ.

-ನಾಲ್ಕು ಚಕ್ರದ ವಾಹನಗಳಲ್ಲಿ ಚಾಲಕನನ್ನು ಹೊರತುಪಡಿಸಿ ಗರಿಷ್ಠ ಇಬ್ಬರಿಗೆ ಪ್ರಯಾಣಿಸಲು ಅವಕಾಶ ಮತ್ತು ದ್ವಿಚಕ್ರ ವಾಹನದಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಸಲು ಅವಕಾಶ.

ಹಸುರು ವಲಯ (ಗ್ರೀನ್ ಝೋನ್)

– ದೇಶಾದ್ಯಂತ ನಿರ್ಬಂಧ ವಿಧಿಸಲಾಗಿರುವ ಸೀಮಿತ ಚಟುವಟಿಕೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಚಟುವಟಿಕೆಗಳನ್ನು ನಡೆಸಲು ಹಸುರು ವಲಯಕ್ಕೆ ಅವಕಾಶವನ್ನು ನೀಡಲಾಗಿದೆ.

– ಹಸುರು ವಲಯದಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಆದರೆ ಒಟ್ಟು ಸಾಮರ್ಥ್ಯದ 50% ಪ್ರಯಾಣಿಕರನ್ನು ಮಾತ್ರವೇ ಕರೆದೊಯ್ಯಲು ಅನುಮತಿ.

ದೇಶಾದ್ಯಂತ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ಎಲ್ಲಾ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರಕ್ಕೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಕ್ತ ಅವಕಾಶ ನೀಡುವಂತೆ ಕೇಂದ್ರ ಗೃಹ ಇಲಾಖೆ ಸ್ಪಷ್ಟ ನಿರ್ದೇಶನವನ್ನು ನೀಡಿದೆ.

ಮತ್ತು ಇಂತಹ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಪ್ರತ್ಯೇಕ ಪಾಸ್ ಗಳ ಅಗತ್ಯ ಇಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next