ಬೆಂಗಳೂರು: ಪೊಲೀಸರ ಸೋಗಿನಲ್ಲಿ ಉತ್ತರ ಭಾರತ ಮೂಲದವರನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ “ಪಂಚರ’ನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರ ನಿವಾಸಿ ಗಣೇಶ್ ಅಲಿಯಾಸ್ ಗಣಿ ಬಂಧಿತ.
ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ದಂಪತಿಯನ್ನು ಹಿಂಬಾಲಿಸಿ ಅವರಿಂದ ನಗದು, ಚಿನ್ನಾಭರಣ ಸುಲಿಗೆ ಮಾಡಿದ್ದ. ಅಲ್ಲದೆ, ಈತನ ವಿಚಾರಣೆ ವೇಳೆ 2007ರಲ್ಲಿ ರಾಬರಿ, 2011ರಲ್ಲಿ ಡಕಾಯಿತಿ, ಸುಲಿಗೆ ಸೇರಿ 7 ಪ್ರಕರಣ ಬೆಳಕಿಗೆ ಬಂದಿವೆ. ಹೀಗಾಗಿ ಈತನಿಂದ ಸುಲಿಗೆ ಅಥವಾ ಬೆದರಿಕೆಗೆ ಒಳಗಾದ ವರು ದೂರು ಕೊಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾಗಿದ್ದ ಗಣೇಶ್, ಉತ್ತರ ಭಾರತ ಮೂಲದವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಂಗಡಿ ಮುಂದೆ ಅಥವಾ ಇತರೆ ಪ್ರದೇಶದಲ್ಲಿ ಸಿಗರೇಟ್ ಸೇದುವವರು ಹಾಗೂ ಹುಡುಗ-ಹುಡುಗಿ ಹೋಗುತ್ತಿದ್ದರೆ, ಅವರನ್ನು ಹಿಂಬಾಲಿಸಿಕೊಂಡು ಹೋಗಿ ಪೊಲೀಸ್ ಎಂದು ಹೆದರಿಸುತ್ತಿದ್ದ. ಬಳಿಕ ಈಗ ತಾನೇ ಗಾಂಜಾ ಸೇವನೆ ಮಾಡಿರುವುದನ್ನು ನೋಡಿದ್ದೇನೆ. ನಿಮ್ಮ ಮೇಲೆ ಮತ್ತೂಂದು ತಂಡ ನಿಗಾ ವಹಿಸುತ್ತಿದ್ದ. ಡ್ರಗ್ಸ್ ಕೇಸ್ ದಾಖಲಿಸದೇ ಇರಲು ಹಣ ಕೊಡಬೇಕೆಂದು ಬೆದರಿಸಿ ನಗದು ಮತ್ತು ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ. ಆ ನಂತರ ಎಟಿಎಂ ಬೂತ್ ಬಳಿಗೆ ಕರೆದೊಯ್ದು ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗುತ್ತಿದ್ದ ಎಂದರು.
ಡಿ.17ರ ರಾತ್ರಿ 9.30ರಲ್ಲಿ ಉತ್ತರ ಭಾರತ ಮೂಲದ ದಂಪತಿ, ಸಿಗರೇಟ್ ಸೇದಿಕೊಂಡು ಮನೆಗೆ ನಡೆದು ಹೋಗಿದ್ದರು. ಅವರನ್ನು ಹಿಂಬಾಲಿಸಿಕೊಂಡು ಹೋದ ಗಣೇಶ್, ಪೊಲೀಸ್ ಎಂದು ಬೆದರಿಸಿ ಮನೆಯಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಬೇಡಿಕೆ ಹಾಕಿದ್ದಾನೆ. ಅದಕ್ಕೆ ಒಪ್ಪದಿದ್ದಾಗ ದಂಪತಿಯನ್ನು ಸರ್ಜಾಪುರ ರಸ್ತೆಗೆ ಕರೆದೊಯ್ದು ಎಟಿಎಂನಲ್ಲಿ ಹಣ ಡ್ರಾ ಮಾಡಿಸಿಕೊಂಡಿದ್ದ. ಬಳಿಕ ದಂಪತಿಯಿಂದ ಚಿನ್ನಾಭರಣ ಕಸಿದುಕೊಂಡು ಮನೆ ಬಳಿ ಬಿಟ್ಟು ಪರಾರಿಯಾಗಿದ್ದ.
ಕೆಲ ದಿನಗಳ ಬಳಿಕ ಟೆಕಿಯೊಬ್ಬರಿಗೆ ಬೆದರಿಸಿ ಎಟಿಎಂ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಸುಲಿಗೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪಂಚರನಾಗಿದ್ದ ಆರೋಪಿ : ಅಪರಾಧ ಪ್ರಕರಣಗಳು ನಡೆದಾಗ ಸ್ಥಳ ಮಹಜರು ಮತ್ತು ಪಂಚನಾಮೆ ಮಾಡಲು ಪರಿಚಯಸ್ಥರನ್ನು “ಪಂಚರು’ ಪೊಲೀಸರು ಕರೆದೊಯುತ್ತಾರೆ. ಅದೇ ರೀತಿ ಗಣೇಶ್‌ನನ್ನು ಕೆಲ ಪೊಲೀಸರು ಪ್ರಕರಣ ಗಳಲ್ಲಿ ಕರೆದೊಯ್ದು ಸಹಿ ಪಡೆಯುತ್ತಿದ್ದರು. ಹೀಗಾಗಿ ಪ್ರಕರಣಗಳಲ್ಲಿ ಕೋರ್ಟ್ ವಿಚಾರಣೆಗೆ ಹಾಜರಾಗುತ್ತೇನೆ ಎಂಬ ಕಾರಣಕ್ಕೆ ಪೊಲೀಸರ ಕಾರ್ಯಾಚರಣೆ ಬಗ್ಗೆ ತಿಳಿದುಕೊಂಡಿದ್ದ. ಅದನ್ನೇ ದುರ್ಬಳಕೆ ಮಾಡಿಕೊಂಡು ಆರೋಪಿ ಬೆದರಿಕೆ ಹಾಕಿ ಸುಲಿಗೆ, ಡಕಾಯಿತಿ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.