ಬೆಂಗಳೂರು: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೊಬ್ಬ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಮಹಿಳಾ ವಕೀಲರೊಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿರುವ ಘಟನೆ ಮಂಗಳವಾರ ನಡೆದಿದೆ.
ಈ ಸಂಬಂಧ ಶೇಷಾದ್ರಿಪುರದ ನಿವಾಸಿ ಜೆ.ವಿ.ಜಯರಾಮರೆಡ್ಡಿ (45) ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯ ಕೃತ್ಯದಿಂದ ಮಲ್ಲೇಶ್ವರ ನಿವಾಸಿ ವಿಮಲಾ ಎಂಬ ವಕೀಲೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಇರಿತಕ್ಕೊಳಗಾದ ವಿಮಲಾ ಕಾನೂನು ಪದವಿ ಪಡೆದುಕೊಂಡಿದ್ದು, ಸದ್ಯ ಎಲ್ಲಿಯೂ ವಕೀಲಿಕೆ ಮಾಡುತ್ತಿಲ್ಲ. ಹತ್ತು ವರ್ಷಗಳ ಹಿಂದೆ ಜಯರಾಮರೆಡ್ಡಿ ಪರಿಚಯವಾಗಿದ್ದು, ಇಬ್ಬರು ಆತ್ಮೀಯವಾಗಿದ್ದರು. ಈ ಮಧ್ಯೆ ಜಯರಾಮರೆಡ್ಡಿಯಿಂದ ವಿಮಲಾ ಲಕ್ಷಾಂತರ ರೂ. ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.
ಆದರೆ, ನಾಲ್ಕು ವರ್ಷಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಹಣಕಾಸು ಮಾತ್ರವಲ್ಲ, ಕೆಲ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.ಈ ಸಂಬಂಧ ವಿಮಲಾ 2020ರಲ್ಲಿ ಶೇಷಾದ್ರಿಪುರ ಠಾಣೆಯಲ್ಲಿ ಜಯರಾಮರೆಡ್ಡಿ ವಿರುದ್ಧ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮಂಗಳವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ನ 1ನೇ ಎಸಿಎಂಎಂ ಹಾಲ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಸಂಬಂಧ ವಿಮಾಲಾ ಕೋರ್ಟ್‌ಗೆ ಬರುತ್ತಿದ್ದರು. ಕೋರ್ಟ್ ಹಾಲ್ ಸಮೀಪದಲ್ಲೇ ಆರೋಪಿ ವಿಮಾಲಾ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಆಕೆಯ ಕೈ ಹಾಗೂ ಹೊಟ್ಟೆ ಭಾಗದಲ್ಲಿ ಇರಿದಿದ್ದಾನೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.