ಪಡುಬಿದ್ರಿ: ಮೂರು ದಶಕಗಳ ಹಿಂದಿನ ಪ್ರಕರಣವೊಂದರ ಆರೋಪಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಶೀರ್ ಅಹಮ್ಮದ್ ಎಂಬಾತನನ್ನು ಮಂಗಳೂರಿನ ವೆಲೆನ್ಶಿಯಾ ಬಳಿ ಪಡುಬಿದ್ರಿ ಪೊಲೀಸರು ಬಂಧಿಸಿ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನಿಗೆ ಜು. 15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
1995ರ ಪ್ರಕರಣಕ್ಕೆ ಸಂಬಂಧಿಸಿ ಎರ್ಮಾಳು ನಿವಾಸಿ ಸುಲೈಮಾನ್ ಅವರಿಂದ ಬರಬೇಕಾಗಿದ್ದ ಹಣವನ್ನು ವಾಪಸ್ ಕೇಳಲು ಪಡುಬಿದ್ರಿ ಪೇಟೆಯಲ್ಲಿ ಸುಲೈಮಾನ್ ಗೆಳೆಯ ಮಂಗಳೂರಿನ ಕುದ್ರೋಳಿ ವಾಸಿ ಉಮ್ಮರ್ ಫಾರೂಕ್ ಹಾಗೂ ಆತನ ಸ್ನೇಹಿತರಾದ ಮಂಗಳೂರು ಕುದ್ರೋಳಿ ವಾಸಿಗಳಾದ ಬಶೀರ್ ಅಹಮ್ಮದ್, ಆರೀಫ್, ಮುಸ್ತಫಾ ಅವರೊಂದಿಗೆ ಬಂದು ಜೀವ ಬೆದರಿಕೆ ಹಾಕಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಅಂದು ಅವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು..
ಈ ಪೈಕಿ ಆರೀಫ್ ಮತ್ತು ಮುಸ್ತಫಾ ನ್ಯಾಯಾಲಯದಿಂದ ಖುಲಾಸೆಯಾಗಿರುತ್ತಾರೆ. ಉಮ್ಮರ್ ಫಾರೂಕ್ ಮತ್ತು ಬಶೀರ್ ಅಹಮ್ಮದ್ ತಲೆಮರೆಸಿಕೊಂಡಿದ್ದರು. ಉಮ್ಮರ್ ಫಾರೂಕ್ 2020ರಲ್ಲಿ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಮರಣದ ದೃಢಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್‌ಐ ಪ್ರಸನ್ನ ಎಂ. ಎಸ್. ಅವರ ನಿರ್ದೇಶನದಂತೆ ಠಾಣಾ ಸಿಬಂದಿಯವರಾದ ಎಎಸ್‌ಐ ರಾಜೇಶ್ ಪಿ., ಎಚ್‌ಸಿ ರಾಜೇಶ್ ಹೆರ್ಗ, ಪಿಸಿ ಸಂದೇಶ ಅವರು ಇದೀಗ ಬಶೀರ್ ಅಹಮ್ಮದ್‌ನನ್ನು ವಶಕ್ಕೆ ಪಡೆದಿದ್ದರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ