ಶಿವಮೊಗ್ಗ: ಮಂಗಳೂರಿನ ಹಿಂದೂ ಯುವಕ ಶರತ್ ಮಡಿವಾಳ ಹತ್ಯೆಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ರಾಷ್ಟ್ರದ್ರೋಹಿ ಸಂಘಟನೆಗಳಿಗೆ ನಿಷೇಧ ವಿಧಿಸಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ರಾಜ್ಯದ ನಿಷ್ಠಾವಂತ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಒಂದು ವರ್ಗದ ಓಲೈಕೆಗಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಟಾಳಿಕೆ ನಡೆಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಹಲವು ಹಿಂದೂ ಸಂಘಟನೆಗಳ ಸುಮಾರು 15 ಮಂದಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದ್ದು, ಸರ್ಕಾರ ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ಕಾರದ ಈ ನಡವಳಿಕೆಯಿಂದ ಜನ ಬೇಸತ್ತು ಹೋಗಿದ್ದಾರೆಂದು ಆಕ್ರೋಶ ವ್ಯಕ್ತಪಡಿದರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಆರ್ ಎಸ್‌ಎಸ್ ಕಾರ್ಯಕರ್ತ ಶರತ್ ಕೆ. ಮಡಿವಾಳರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಶರತ್ ಮಡಿವಾಳರ ಹತ್ಯೆಯಾಗಿ 10 ದಿನ ಕಳೆದರೂ ಸಹ
ಯಾವೊಬ್ಬ ಅಪರಾಧಿಗಳನ್ನು ಬಂಧಿಸಿಲ್ಲ. ಪೊಲೀಸರ ಕರ್ತವ್ಯ ಪಾಲನೆಗೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಶರತ್ ಕೊಲೆಯ ಹಿಂದಿನ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಅಕ್ರಮಗಳ ಬಗ್ಗೆ ವರದಿ ನೀಡಿದ ದಕ್ಷ ಅಧಿಕಾರಿ ಡಿಐಜಿ ರೂಪಾ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದು ಖಂಡನೀಯ ಎಂದರು. ಸರ್ಕಾರ ಭ್ರಷ್ಟರಿಗೆ ಪ್ರಾಶಸ್ತ ನೀಡುವುದನ್ನು
ಬಿಟ್ಟು, ರಾಜ್ಯದ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು. ರೂಪಾ ಅವರ ವರ್ಗಾವಣೆ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಿ ಭಯದ ವಾತಾವರಣ ಮೂಡಿಸುತ್ತಿರುವ ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್, ಕೆ.ಇ. ಕಾಂತೇಶ್, ಎನ್.ಜಿ. ನಾಗರಾಜ್, ಎನ್. ಜೆ. ರಾಜಶೇಖರ್, ಎಸ್. ಜ್ಞಾನೇಶ್ವರ್, ಮಧುಸೂದನ್, ಹಿರಣ್ಣಯ್ಯ, ರತ್ನಾಕರ ಶೆಣೈ, ರೇಣುಕಾ ನಾಗರಾಜ್, ಸುರೇಖಾ ಮುರಳೀಧರ್, ಅರ್ಚನಾ ಬಳ್ಳೆಕೆರೆ, ಎಸ್. ರಮೇಶ್ ಮತ್ತಿತರರು ಇದ್ದರು.