ಬೆಂಗಳೂರು/ಮಾಗಡಿ: ನಗರಕ್ಕೆ ನೀರು ಪೂರೈಸುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಾರ್ಖಾನೆಗಳಿಂದ ಹರಿದುಬರುತ್ತಿರುವ ಮಲಿನ ನೀರು ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು ಮತ್ತು ಕಲ್ಲು ಗಣಿಗಾರಿಕೆ ಕುರಿತಂತೆ ವಿಧಾನಮಂಡಲದ ಲೆಕ್ಕಪತ್ರಗಳ ಸಮಿತಿ ಶುಕ್ರವಾರ ಪರಿಶೀಲನೆ ನಡೆಸಿದೆ.
ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದ ತಂಡ, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಮರಳು ಮತ್ತು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳನ್ನು ಕಲೆಹಾಕಿತಲ್ಲದೆ, ಜಲಾನಯನ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆಯೂ ಪರಿಶೀಲಿಸಿತು.
ಬಯಲುಸೀಮೆ ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯಿಂದ 2019ರ ವೇಳೆ ತಿಪ್ಪಗೊಂಡನಹಳ್ಳಿ ಪ್ರದೇಶಕ್ಕೆ ನೀರು ಬರುವ ಸಾಧ್ಯತೆ ಇದ್ದು, ಅದಕ್ಕೆ ಮುನ್ನ ಜಲಾಶಯವನ್ನು ಸಂಪೂರ್ಣ ಶುದ್ಧೀಕರಿಸಬೇಕು ಎಂಬುದನ್ನು ಮನಗಂಡ ಸಮಿತಿ, ಈ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ಪ್ರಸ್ತುತ ಜಲಾಶಯದಲ್ಲಿ ಕೇವಲ 2 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಇತ್ತೀಚೆಗೆ ಬೆಂಗಳೂರು ಸುತ್ತಮುತ್ತ ಹೆಚ್ಚು ಮಳೆಯಾಗುತ್ತಿದ್ದರೂ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಹೆಚ್ಚುವರಿ ನೀರು ಸಂಗ್ರಹ ಅಸಾಧ್ಯ ಎನ್ನುವಂತಾಗಿದೆ.
ಅಲ್ಲದೆ, ಪ್ರಸ್ತುತ ಸಂಗ್ರಹವಾಗಿರುವ 2 ಟಿಎಂಸಿ ನೀರನ್ನು ಜನರಿಗೆ ಪೂರೈಕೆ ಮಾಡುವುದಿದ್ದರೂ ಅದಕ್ಕೆ ಮುನ್ನ ಶುದ್ಧೀಕರಣ ಮಾಡಬೇಕಾಗುತ್ತದೆ ಎಂಬ ವಿಚಾರವನ್ನು ಆಲಿಸಿದ ಸಮಿತಿ, ತನ್ನ ಶಿಫಾರಲಿಸನಲ್ಲಿ ಈ ಕುರಿತ ಅಂಶವನ್ನು ಸೇರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ವೇಳೆ ಸಮಿತಿ ಸದಸ್ಯರಾದ ವಿನಯಕುಮಾರ್ ಸೊರಕೆ, ವಿಶ್ವೇಶ್ವರಯ್ಯ ಕಾಗೇರಿ, ಬಿ.ಜೆ.ಪುಟ್ಟಸ್ವಾಮಿ, ವಿ.ಸೋಮಣ್ಣ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹಾಜರಿದ್ದರು.