ಬೆಂಗಳೂರು: ರಾಜರಾಜೇಶ್ವರಿನಗರ ವಲಯಕ್ಕೆ ಸಂಬಂಧಿಸಿದಂತೆ 14 ಪ್ರಕರಣಗಳಲ್ಲಿ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸದೆ ನಿಯಮ ಬಾಹಿರವಾಗಿ ಖಾತಾ ನೀಡಿರುವ ಪಾಲಿಕೆಯ ಆರು ಮಂದಿ ನೌಕರರನ್ನು ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತರು ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವಲಯ ಜಂಟಿ ಆಯುಕ್ತ ಡಾ.ವೀರಭದ್ರಪ್ಪ ಅವರ ಸೇವೆ ಪಾಲಿಕೆಗೆ ಅಗತ್ಯವಿಲ್ಲ ಎಂದು ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಆರ್.ಆರ್.ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಮೆಹತಾ ರಿಯಲ್ ಎಸ್ಟೇಟ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ 13,902.25 ಚದರ ಅಡಿಯಲ್ಲಿ ನಿರ್ಮಿಸಿರುವ 35 ಫ್ಲಾಟ್‌ಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಹಾಗೂ ಆರಂಭಿಕ ಪ್ರಮಾಣ ಪತ್ರಗಳು ಇಲ್ಲದಿದ್ದರೂ ಜಂಟಿ ಆಯುಕ್ತ ವೀರಭದ್ರಪ್ಪ ಹಾಗೂ ಸಹಾಯಕ ಕಂದಾಯ ಅಧಿಕಾರಿ ರಾಮಮೂರ್ತಿ 35 ಫ್ಲಾಟ್‌ಗಳಿಗೆ ಖಾತಾ ವಿಭಜನೆ ಮಾಡಿಕೊಟ್ಟಿದ್ದಾರೆ ಎಂದು ಜಂಟಿ ಆಯುಕ್ತರು (ಕಂದಾಯ) ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಹಲಗೆವಡೇಹಳ್ಳಿಯಲ್ಲಿ 2.01 ಎಕರೆ ವಿಸ್ತೀರ್ಣದ ಏಕರೂಪ ನಿವೇಶನಕ್ಕೆ ಖಾತಾ ವಿಭಜಿಸಿ ಕೊಡಲಾಗಿದೆ. 2014ರ ಬಿಬಿಎಂಪಿ ಆಯುಕ್ತರು ಆದೇಶದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೊಂಡು ವಿಭಜನೆಕೊಳ್ಳದ ಏಕರೂಪ ನಿವೇಶನದ ಸ್ವತ್ತುಗಳಿಗೆ ಸುಧಾರಣಾ ವೆಚ್ಚವನ್ನು ಪಾವತಿಸಿಕೊಂಡು ಖಾತೆ ನೊಂದಾವಣಿ ಮಾಡಲು ಅವಕಾಶವಿರುತ್ತದೆ. ಆದರೆ, ಭೂ ಪರಿವರ್ತನೆಗೊಂಡ ಏಕರೂಪ ನಿವೇಶನಗಳನ್ನು ವಿಭಜಿಸಲು ಅವಕಾಶವಿಲ್ಲ ಎಂಬ ಆದೇಶವಿದ್ದರೂ ಜಂಟಿ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಕಾನೂನು ಮೀರಿ ಅನುಮತಿ ನೀಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆರ್.ಆರ್.ನಗರದಲ್ಲಿ 14 ಪ್ರಕರಣಗಳಲ್ಲಿ ಕಾನೂನು ಬಾಹಿರವಾಗಿ ಅನುಮತಿ ನೀಡಿರುವ ಆರ್.ಆರ್.ನಗರ ವಲಯದ ಸಹಾಯಕ ಕಂದಾಯ ಅಧಿಕಾರಿ ರಾಮಮೂರ್ತಿ, ಉಪವಲಯ ಸಹಾಯಕ ಕಂದಾಯ ಅಧಿಕಾರಿ ಮಹೇಶ್, ದ್ವಿತಿಯ ದರ್ಜೆ ಸಹಾಯಕ ಪುನೀತ್, ಕಂದಾಯ ಪರಿವೀಕ್ಷಕ (ಹಾಲಿ ವೈಟ್‌ಫೀಲ್ಡ್) ವೆಂಕಟೇಶ್, ಕಂದಾಯ ಪರಿವೀಕ್ಷಕ (ಹಾಲಿ ಚಿಕ್ಕಪೇಟೆ) ತಿಮ್ಮಪ್ಪ, ಕಂದಾಯ ಪರಿವೀಕ್ಷಕ(ಹಾಲಿ ದಾಸರಹಳ್ಳಿ) ಪಿ.ನಾರಾಯಣಸ್ವಾಮಿ ಅವರನ್ನು 1966ರ ಸರ್ಕಾರಿ ನೌಕರರ (ನಡತೆ) ನಿಯಾವಳಿ ಉಲ್ಲಂ ಸಿ ಕರ್ತವ್ಯ ಲೋಪ ಎಸಗಿರುವುದರಿಂದ ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.