Advertisement

ಅಪಘಾತ ನಡೆದಾಗ ಸ್ಪಂದಿಸಿ: ಎಸ್‌ಪಿ ಕರೆ

04:42 PM Mar 25, 2017 | |

ಮಡಿಕೇರಿ: ಅಮೆರಿಕದಂತಹ ಮುಂದುವರಿದ ದೇಶದಲ್ಲಿ ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಹಾಗೂ ವಾಹನ ಅಪಘಾತಗಳು ಸಂಭವಿಸುತ್ತಿದ್ದರು ಕೂಡ ಅಲ್ಲಿ ಅಪಘಾತಗಳಿಂದ ಸಂಭವಿಸುವ ಮರಣಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.  ಇದಕ್ಕೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಾಗರಿಕರ, ವೈದ್ಯರ ಮತ್ತು ಪೊಲೀಸ್‌ ಇಲಾಖೆಯ ತುರ್ತು ಸ್ಪಂದನೆಯೇ ಪ್ರಮುಖ ಕಾರಣವಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್‌ ತಿಳಿಸಿದ್ದಾರೆ.

Advertisement

ರಸ್ತೆ ಅಪಘಾತಗಳಲ್ಲಿ ಪ್ರತಿ ನಾಗರಿಕನ ಜವಾಬ್ದಾರಿಯುತ ಪ್ರತಿಕ್ರಿಯೆ ಅನೇಕ ಪ್ರಾಣಗಳನ್ನು ಉಳಿಸಬಲ್ಲುದು ಎಂದು ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ   ಪಿ. ರಾಜೇಂದ್ರಪ್ರಸಾದ್‌ ಅಭಿಪ್ರಾಯಪಟ್ಟರು.

ಮಡಿಕೇರಿ ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಸಹಯೋಗದೊಂದಿಗೆ ಪೊಲೀಸ್‌ ಇಲಾಖಾ ಅಧಿಕಾರಿ ಮತ್ತು ಸಿಬಂದಿ ವರ್ಗದವರಿಗೆ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಸಿಬಂದಿಗಳನ್ನುದ್ದೇಶಿಸಿ ಮಾತನಾಡಿದರು. 
  
ಇದೇ ರೀತಿ ಭಾರತದಲ್ಲೂ ಸಹಾ ಯಾವುದೇ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಿ ಗಾಯಾಳುಗಳ ಪ್ರಾಣ ಉಳಿಸಲು ಅಮೃತ ಗಳಿಗೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸಮಾಜದ, ವೈದ್ಯಾಧಿಕಾರಿಗಳ ಮತ್ತು ಪೊಲೀಸ್‌ ಇಲಾಖೆಯ ಪಾತ್ರ ಅತಿ ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಪ್ರಕಾರ ಮಾನವೀಯ ನೆಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ತುರ್ತು ಚಿಕಿತ್ಸೆಗೆ ಸ್ಪಂದಿಸುವ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಯಾವುದೇ ಇಲಾಖೆಯಿಂದ ತೊಂದರೆಯುಂಟಾಗುವುದಿಲ್ಲ ಆದ್ದ ರಿಂದ ಅಪಘಾತದ ಸಂದರ್ಭದಲ್ಲಿ ಎಲ್ಲ ನಾಗರಿಕರು ಪೊಲೀಸರ  ಅಥವಾ ವೈದ್ಯರ ಬರುವಿಕೆಯನ್ನು ಕಾಯದೆ ಗಾಯಾಳುಗಳ ಪ್ರಾಣ ರಕ್ಷಣೆಗೆ ಮುಂದಾಗಬೇಕೆಂದು ಕರೆಯಿತ್ತರು.

ಕಾರ್ಯಾಗಾರದಲ್ಲಿ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ತಜ್ಞ ವೈದ್ಯರ ತಂಡ ರಸ್ತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪ್ರಾಣ ಉಳಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿ ಮತ್ತು ಸಿಬಂದಿಗಳಿಗೆ ಉತ್ತಮ ರೀತಿಯ ವಿವರಣೆ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಿದರು. 

ಕಾರ್ಯಾಗಾರದಲ್ಲಿ ಕೊಡಗು ಜಲ್ಲೆಯ ಪೊಲೀಸ್‌ ಅಧಿಕಾರಿ ಗಳು ಹಾಗೂ ಸಿಬಂದಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next