ಶೃಂಗೇರಿ: ಯಕ್ಷಗಾನಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಸರಕಾರ ಯಕ್ಷಗಾನ ಅಕಾಡೆಮಿ ಮೂಲಕ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಟ್ರಸ್ಟ್ ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ರವಿವಾರ ಯಕ್ಷಗಾನ ಅಕಾಡೆಮಿಯಿಂದ ಆಯೋಜಿಸಿದ್ದ ಕಾಳಿಂಗ ನಾವಡ ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಳಿಂಗ ನಾವುಡರು ಯಕ್ಷಗಾನದ ಮುಕುಟವಿದ್ದಂತೆ. ನಾವುಡರಿಗೆ ಲಕ್ಷಾಂತರ ಅಭಿಮಾನಿಗಳಿದ್ದರು. ಅವರ ಕಂಠಸಿರಿ ಅದ್ಭುತವಾಗಿದ್ದು, ಇದನ್ನು ಕೇಳಲು ವಾರಗಟ್ಟಲೆ ಅಭಿಮಾನಿಗಳು ಕಾಯುತ್ತಿದ್ದರು. ಅವರ ಗುರುವಾಗಿದ್ದ ನಾರಾಯಣ ಉಪ್ಪೂ³ರರ ಬಗ್ಗೆ ವಿಶೇಷ ಗೌರವ ಹೊಂದಿದ್ದ ನಾವುಡರು, ಅವರ ಹಾದಿಯಲ್ಲಿ ಮುನ್ನಡೆದು ಕಲಾ ಸೇವೆಯಲ್ಲಿ ಮೇರು ಮಟ್ಟಕ್ಕೆ ಏರಿದರು. ಸರಕಾರ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡಲು ತರಬೇತಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದೆ ಎಂದರು.
ಕಾಳಿಂಗ ನಾವುಡರ ಬಗ್ಗೆ ಶಾಶ್ವತ ಯೋಜನೆಯನ್ನು ಸರಕಾರ ಮಾಡಲಿದೆಯೇ ಎಂಬ ಪ್ರತಿಷ್ಠಾನದ ಮನವಿಗೆ ಉತ್ತರಿಸಿದ ಸಚಿವರು, ಸರಕಾರ ಆರ್ಥಿಕ ನೆರವು ನೀಡಲು ಸಿದ್ಧವಿದೆ. ಯೋಜನೆಯನ್ನು ರೂಪಿಸಿ, ಮುಂದುವರಿಸುವ ಜವಾಬ್ದಾರಿ ಸಂಘ-ಸಂಸ್ಥೆಯದ್ದಾಗಿದೆ. ಸರಕಾರ ನಿಮ್ಮ ಜತೆಯಲ್ಲಿದೆ. ನಾವುಡರ ಯಕ್ಷಗಾನ ಶೈಲಿ ಉತ್ಕೃಷ್ಟವಾಗಿ ಬೆಳೆಯಲು ಅಕಾಡೆಮಿ ಯೋಜನೆ ರೂಪಿಸಲಿ. ಕೋವಿಡ್ ಹಿನ್ನೆಲೆಯಲ್ಲಿ ಕಲೆಗೆ ಹಿನ್ನಡೆಯಾಗಿದ್ದು, ಸರಕಾರ ಕಲೆಗಾಗಿ ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.
ದಾಖಲೀಕರಣಕ್ಕೆ ಗಮನ ಈ ಮೊದಲು ಕಾಳಿಂಗ ನಾವಡ ರಾಷ್ಟ್ರೀಯ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಎ. ಹೆಗಡೆ ಅವರು ಅಕಾಡೆಮಿಯು ಯಕ್ಷಗಾನ ಪರಂಪರೆಯ ಉಳಿವಿಗಾಗಿ ವಿಚಾರ ಮಂಥನ-ದಾಖಲೀಕರಣ- ಸಮಗ್ರ ದರ್ಶನವನ್ನು ಆನಾವರಣ ಗೊಳಿ ಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದರು.