Advertisement

ಜಿಲ್ಲೆಯ ಶೈಕ್ಷಣಿಕ ಸ್ಥಿತಿ ಶೋಚನೀಯ

01:29 PM May 01, 2018 | |

ಬೀದರ: ಯುಪಿಎಸ್‌ಸಿ ಸೇರಿದಂತೆ ವಿವಿಧ ಉನ್ನತ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿರುವ ಗಡಿ ಜಿಲ್ಲೆ ಬೀದರ ಪಿಯುಸಿ ಫಲಿತಾಂಶದಲ್ಲಿ ಮಾತ್ರ ಕೊನೆ ಸ್ಥಾನದತ್ತ ಗಿರಕಿ ಹೊಡೆಯುತ್ತಿರುವುದು ಶೋಚನೀಯ ಸಂಗತಿ. ಪ್ರತಿ ವರ್ಷ ಫಲಿತಾಂಶದಲ್ಲಿ ಏರಿಳಿತ ಕಾಣುತ್ತಿರುವ ಬೀದರ ಈ ಬಾರಿ ಶೇ.52.63ರಷ್ಟು ಫಲಿತಾಂಶ ಪಡೆದು 32ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

Advertisement

ಕಳೆದ ಬಾರಿಗಿಂತ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಕೊಂಚ ಸುಧಾರಣೆ ಕಂಡಿರುವುದರಿಂದ ತೃಪ್ತಿಪಡಬೇಕಷ್ಟೆ. 2016ರಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ದಾಪುಗಾಲು ಇಟ್ಟು 27ನೇ ಸ್ಥಾನಕ್ಕೆ ಮೇಲೇರಿತ್ತು.  ನಂತರ ಜಿಲ್ಲೆ 2017ರಲ್ಲಿ ಶೇ. 42.05ರಷ್ಟು ಫಲಿತಾಂಶದೊಂದಿಗೆ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಬಾರಿಯ ಫಲಿತಾಂಶದಲ್ಲಿ ಶೇ. 10.58ರಷ್ಟು ಹೆಚ್ಚಳವಾಗಿರುವುದು ಸಮಾಧಾನಕರ. ಇತ್ತೀಚೆಗೆ ಪ್ರಕಟಗೊಂಡಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೀದರನ ಪ್ರತಿಭೆ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಗಳಿಸಿದ್ದರೆ, ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಜಿಲ್ಲೆಯ ಅನೇಕ ಪ್ರತಿಭೆಗಳು ಸಾಧನೆ ಮಾಡಿದ್ದಾರೆ. 

ಪಿಯುಸಿಯಲ್ಲೂ ರ್‍ಯಾಂಕ್‌ ಗಳಿಕೆಯಲ್ಲಿ ಜಿಲ್ಲೆ ಹಿಂದುಳಿದಿಲ್ಲ. ಆದರೆ, ರಾಜ್ಯಕ್ಕೆ ಹೋಲಿಸಿದರೆ ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ಮಾತ್ರ ಹಿನ್ನಡೆಯಾಗುತ್ತಿದೆ. ಖಾಸಗಿ ಕಾಲೇಜುಗಳ ಸಾಧನೆ ಅತ್ಯುತ್ತಮ ಆಗಿದ್ದರೆ ಸರ್ಕಾರಿ- ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಪಡೆಯುತ್ತಿಲ್ಲ. 

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಫಲಿತಾಂಶ ಹಿನ್ನಡೆಗೆ ಪ್ರಮುಖ ಕಾರಣ ಎಂದೆನ್ನಲಾಗುತ್ತಿದೆ. ಉಪನ್ಯಾಸಕರ ಖಾಲಿ ಸ್ಥಾನಗಳನ್ನು ತುಂಬಲು ಜಿಲ್ಲಾಡಳಿತ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿದೆ. ಆದರೆ, ಶೈಕ್ಷಣಿಕ ವರ್ಷ ಆರಂಭಗೊಂಡ ಎರಡೂಮೂರು ತಿಂಗಳು ಬಳಿಕ. ಇದರಿಂದ ಪಾಠ ಬೋಧನೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರಿಂದ ಮಕ್ಕಳ ಬೋಧನೆ ಮೇಲೆ ಪರಿಣಾಮ ಉಂಟಾಗಿ ಫಲಿತಾಂಶ ಕುಸಿತ ಆಗುತ್ತಿದೆ.
 
ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ಪಿಯು ಫಲಿತಾಂಶದ ಮೇಲೆ ಬೆಳಕು ಚಲ್ಲಿದಾಗ ಸಾಕಷ್ಟು ಏರಿಳಿತ ಕಾಣಬಹುದು. 2000-01ನೇ ಸಾಲಿನಿಂದ 2003ರ ವರೆಗೆ ತೀವ್ರ ಹಿನ್ನಡೆ ಸಾಧಿಸುತ್ತಿದ್ದ ಜಿಲ್ಲೆ ನಂತರ ಎರಡು ವರ್ಷ ಉತ್ತಮ ಫಲಿತಾಂಶ ಪಡೆದಿತ್ತು.

ಆದರೆ, 2005-06ರಿಂದ ಮತ್ತೆ ಮೊದಲಿನಂತೆ ಕೊನೆ ಸ್ಥಾನಕ್ಕೆ ತಲುಪಿತ್ತು. 2008-09ರಲ್ಲಿ ಕೊನೆ ಸ್ಥಾನದಲ್ಲಿದ್ದರೂ ಉತ್ತಮ ರೀತಿಯಲ್ಲಿ ಶೇಕಡವಾರು ಫಲಿತಾಂಶ ಪಡೆದಿತ್ತು. ತದನಂತರ ಶೇ.49.71ರಷ್ಟು ಫಲಿತಾಂಶ ಗಿಟ್ಟಿಸಿಕೊಂಡು ಗಮನಾರ್ಹ ಎನಿಸಿಕೊಂಡಿತ್ತು. 2009-10ರಿಂದ ಈಚೆಗೆ ಫಲಿತಾಂಶ ಕುಸಿತ ಕಾಣುತ್ತಿದ್ದರೂ 2016ರಲ್ಲಿ ಹೊಸ ಭರವಸೆ ಹುಟ್ಟಿಸಿತ್ತು.
 
ಜಿಲ್ಲೆಯಲ್ಲಿ ಫಲಿತಾಂಶದ ಏರಿಳಿತ: ಬೀದರ ಜಿಲ್ಲೆ 2000-01ರಲ್ಲಿ 21.83ರಷ್ಟು ಮತ್ತು ಫಲಿತಾಂಶ ಪಡೆದಿತ್ತು. ನಂತರ 2001-02ರಲ್ಲಿ 22.09ರಷ್ಟು, 2002-03ರಲ್ಲಿ 25.33 ರಷ್ಟು, 2003-04ರಲ್ಲಿ 37.24ರಷ್ಟು, 2004-05ರಲ್ಲಿ 41.16ರಷ್ಟು, 2005-06ರಲ್ಲಿ 20.32ರಷ್ಟು, 2006-07ರಲ್ಲಿ 20.20ರಷ್ಟು 2007-08ರಲ್ಲಿ 16.57ರಷ್ಟು, 2008-09ರಲ್ಲಿ ಶೇ. 34ರಷ್ಟು, 2009-10ರಲ್ಲಿ ಶೇ. 49.71ರಷ್ಟು, 2010-11ರಲ್ಲಿ ಶೇ. 45ರಷ್ಟು, 2011-12ರಲ್ಲಿ ಶೇ. 40.32ರಷ್ಟು, 2012- 13ರಲ್ಲಿ ಶೇ. 44.24ರಷ್ಟು, 2013-14ರಲ್ಲಿ ಶೇ. 44.95ರಷ್ಟು, 2015ರಲ್ಲಿ ಶೇ. 54.4 ಮತ್ತು 2016ರಲ್ಲಿ ಶೇ. 52.07ರಷ್ಟು ಅಂಕ ಪಡೆದಿತ್ತು. 2017ರಲ್ಲಿ ಶೇ. 42.05ರಷ್ಟು ಅಂಕ ಪಡೆದು ಮತ್ತೆ ಕುಸಿತ ಕಂಡಿತು.

Advertisement

ಉಪನ್ಯಾಸಕರ ಕೊರತೆ ಕಾರಣ ಪಿಯುಸಿಯಲ್ಲಿ ಕಳೆದ ಬಾರಿ ಶೇ.10ರಷ್ಟು ಫಲಿತಾಂಶ ಹೆಚ್ಚಿಸಿಕೊಂಡರೂ ತೃಪ್ತಿಕರವಾಗಿಲ್ಲ. ಬೀದರ ಜಿಲ್ಲೆ ಶೇ. 52.63ರಷ್ಟು ಫಲಿತಾಂಶ ಪಡೆದು 31ನೇ ಸ್ಥಾನದಲ್ಲಿದೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕ ಕೊರತೆ ಫಲಿತಾಂಶ ಹಿನ್ನಡೆಗೆ ಪ್ರಮುಖ ಕಾರಣ ಆಗುತ್ತಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯೂ ಸಮಯಕ್ಕೆ ಮಾಡುತ್ತಿಲ್ಲ. ಮುಂದಿನ ವರ್ಷ ಸುಧಾರಣೆಗೆ ಅಗತ್ಯ ಕ್ರಮ ವಹಿಸಲಾಗುವುದು. ಶೀಘ್ರದಲ್ಲಿ ಉಪನ್ಯಾಸಕರ ನೇಮಕಾತಿಗೆ ಮನವಿ ಮಾಡಲಾಗುವುದು. ಪ್ರತಿ ಯೂನಿಟ್‌ ಪರೀಕ್ಷೆ ಹಾಗೂ ಪರಿಹಾರ ಬೋಧನೆಯ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಿಸಲಾಗುವುದು.
 ಮಲ್ಲಿಕಾರ್ಜುನ ಎಸ್‌ ಡಿಡಿಪಿಯು, ಬೀದರ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next