ಜೇವರ್ಗಿ: ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಗುರುವಾರ ಬಸವ ಜಯಂತಿ ನಿಮಿತ್ತ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪೂರ್ವಭಾವಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಪಂ ಅಧಿಕಾರಿಗಳು ಹೊರತುಪಡಿಸಿ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು.
ಇದಕ್ಕೆ ತಹಶೀಲ್ದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಸವಾಭಿಮಾನಿಗಳು, ಸರ್ಕಾರ ಶರಣರ, ಸಂತರ ಜಯಂತಿ ಆಚರಿಸುತ್ತಿದೆ. ಆದರೆ ತಾಲೂಕು ಮಟ್ಟದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಆಗಮಿಸುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ.
ತಾಲೂಕು ಅಡಳಿತಕ್ಕೆ ಸಹಕಾರ ನೀಡಬೇಕಾದ ಅಧಿಕಾರಿಗಳು ಬೇಜವಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಸಮಾನತೆ ಹರಿಕಾರ ವಿಶ್ವಗುರು ಬಸವಣ್ಣನವರಿಗೆ ಅಧಿಕಾರಿಗಳು ಅಗೌರವ ತೋರುತ್ತಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರಗೆ ಆಗ್ರಹಿಸಿದರು.
ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸಿದಾಗ ಮಾತ್ರ ಪೂರ್ವಭಾವಿ ಸಭೆ ಆಯೋಜಿಸಿ. ಇಲ್ಲದಿದ್ದರೇ ನಾಮಕಾವಾಸ್ತೆ ಸಭೆ ಮಾಡಬೇಡಿ ಎಂದು ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ಧೇವಾಡಗಿ ಆಕ್ರೋಶವ್ಯಕ್ತಪಡಿಸಿದರು. ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮಾತನಾಡಿ, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು.
ಅಲ್ಲದೇ ಶೀಘ್ರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಿ ಜಯಂತಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗುವುದು. ಅಲ್ಲದೇ ಎಲ್ಲ ಬಸವಾಭಿಮಾನಿಗಳ ಹಾಗೂ ಸಮಾಜದ ಮುಖಂಡರ ಕೈಗೊಂಡ ನಿರ್ಣಯದಂತೆ ಏ. 29ರಂದು ಬೆಳಗ್ಗೆ 9:00ಕ್ಕೆ ಬಸವೇಶ್ವರ ವೃತ್ತದ ಬಳಿ ಧ್ವಜಾರೋಹಣ ನಂತರ ತಹಶೀಲ್ದಾರ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಬಳಿಕ ಕಾರ್ಯಕ್ರಮ ನಡೆಲಾಗುವುದು ಎಂದು ಹೇಳಿದರು.
ಗ್ರೇಡ್-2 ತಹಶೀಲ್ದಾರ ಶರಣಬಸಪ್ಪ ಮುಡುಬಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಪ್ರವೀಣಕುಮಾರ ಕುಲಕರ್ಣಿ, ಕಸಾಪ ಅಧ್ಯಕ್ಷ ಶಿವಣಗೌಡ ಹಂಗರಗಿ, ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಬಾಪುಗೌಡ ಬಿರಾಳ, ಚಂದ್ರಶೇಖರ ಸೀರಿ, ಮಹಾಂತಗೌಡ ಚನ್ನೂರ,
ನೀಲಕಂಠ ಅವಂಟಿ, ಭೋವಿ ಸಮಾಜದ ಅಧ್ಯಕ್ಷ ಶಿವುಕುಮಾರ ಗುತ್ತೇದಾರ, ಅಬ್ದುಲ್ ರಹೇಮಾನ ಪಟೇಲ್, ದಲಿತ ಮುಖಂಡರಾದ ಮಲ್ಲಣ್ಣ ಕೊಡಚಿ, ಸಿದ್ರಾಮ ಕಟ್ಟಿ, ರವಿ ಕುಳಗೇರಿ, ಈಡಿಗ ಸಮಾಜದ ಅಧ್ಯಕ್ಷ ದೇವಿಂದ್ರ ಗುತ್ತೇದಾರ, ರವಿ ಕೋಳಕೂರ, ಸುನೀಲ ಸಜ್ಜನ, ಯಶವಂತ್ರಾಯ ಸಂಕಾ, ಬಸವರಾಜ ಜಮಶೆಟ್ಟಿ, ಸಂತೋಷ ಮಲ್ಲಾಬಾದ ಇದ್ದರು.