Advertisement

ನೋಟು ರದ್ಧತಿಯಿಂದ ದೇಶದ ಆರ್ಥಿಕತೆಗೆ ಹೊಡೆತ

12:39 PM Feb 25, 2017 | Team Udayavani |

ಮೈಸೂರು: ನೋಟು ರದ್ದು ಮಾಡುವುದರಿಂದ ದೇಶದಲ್ಲಿರುವ ಕಪ್ಪು ಹಣ ಅಥವಾ ಸಂಪತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ ಎಂದು ಜೆಎನ್‌ಯು ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅರುಣ್‌ಕುಮಾರ್‌ ಅಭಿಪ್ರಾಯಪಟ್ಟರು.

Advertisement

ದಲಿತ ಸಂಘರ್ಷ ಸಮಿತಿ, ರಾಜ್ಯ ರೈತಸಂಘ, ಕರ್ನಾಟಕ ಜನಶಕ್ತಿ, ಎಐಡಿವೈಒ, ಎಐಎಂಎಸ್‌ಎಸ್‌ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ “ನೋಟು ರದ್ಧತಿ ಸಾಧಕ- ಬಾಧಕಗಳು ಮತ್ತು ಕಪ್ಪು ಹಣದ ಬಗ್ಗೆ ಸರ್ಕಾರ ಎಷ್ಟು ಗಂಭೀರವಾಗಿದೆ’ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರ ನೋಟ್‌ಬ್ಯಾನ್‌ನಿಂದಾಗಿ ದೇಶದ ಶೇಕಡ 94 ಅಸಂಘಟಿತ ಹಾಗೂ ಶೇ.4 ಸಂಘಟಿತರಿಗೆ ಬರೆ ಬಿದ್ದಂತಾಗಿದೆ. ದೇಶದಲ್ಲಿ ನೋಟ್‌ಬ್ಯಾನ್‌ ಮಾಡುವುದರಿಂದ ನಕಲಿ ನೋಟಿನ ಹಾವಳಿ, ಕಪ್ಪುಹಣ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕಬಹುದು ಎಂದು ಪ್ರಧಾನಿ ವಿಶ್ವಾಸ ಹೊಂದಿದ್ದರು. ಆದರೆ ದೇಶದಲ್ಲಿ 15.4 ಲಕ್ಷ ಕೋಟಿಯಲ್ಲಿ ಕೇವಲ 400 ಕೋಟಿ ಮಾತ್ರ ನಕಲಿ ನೋಟು ಲಭಿಸಿದೆ ಎಂದರು.

ಹೀಗಾಗಿ ದೇಶದಲ್ಲಿ ಭಯೋತ್ಪಾದನೆಗೆ ಕೇವಲ ನಕಲಿ ನೋಟಿನಿಂದ ಮಾತ್ರವೇ ಹಣ ಸಂದಾಯವಾಗುತ್ತಿಲ್ಲ. ಬದಲಿಗೆ ಚಿನ್ನದ ಕಳ್ಳಸಾಗಣೆ, ಮಾದಕ ವಸ್ತುಗಳ ಜಾಲ, ಕ್ರಿಕೆಟ್‌ ಬೆಟ್ಟಿಂಗ್‌ ಸೇರಿದಂತೆ ಹಲವು ಮೂಲಗಳಿಂದ ಬಂಡವಾಳ ಸಿಗಲಿದೆ. ಜತೆಗೆ ¸‌Åಷ್ಟರ ಕೂಟದಲ್ಲಿರುವ ದೇಶದ ಜನರು ಕಪ್ಪು ಹಣವನ್ನು ಬಿಳಿ ಮಾಡುವ ಸಾಕಷ್ಟು ಮಾರ್ಗಗಳನ್ನು ಅನುಸರಿಸಿದ್ದಾರೆ. ಹೀಗಾಗಿ ಮೋದಿ ನಿರೀಕ್ಷಿಸಿದಂತೆ ನೋಟ್‌ಬ್ಯಾನ್‌ನಿಂದ ಯಾವುದೇ ಬದಲಾವಣೆ ಆಗಲಿಲ್ಲ. 

ಆದ್ದರಿಂದ ದೇಶದಲ್ಲಿನ ಭಯೋತ್ಪಾದನೆ ನಿಯಂತ್ರಿಸಬೇಕಿದ್ದಲಿ, ಪ್ರಜಾಪ್ರಭುತ್ವದ ಸಹಭಾಗಿತ್ವದಿಂದ ಮಾತ್ರವೇ ಸಾಧ್ಯ. ಕೇಂದ್ರ ಸರ್ಕಾರದ ನಿರೀಕ್ಷೆಯಂತೆ ಪ್ರತಿಯೊಬ್ಬರು ತಮ್ಮ ಹಣವನ್ನು ಬ್ಯಾಂಕ್‌ಗಳಿಗೆ ಹಾಕಿದರೆ, ಖದೀಮರು ಖಾತೆಯನ್ನು ಹ್ಯಾಕ್‌ ಮಾಡಲಿದ್ದಾರೆ ಎಂಬ ಆತಂಕ ಜನರಲ್ಲಿದೆ ಎಂದರು.

Advertisement

ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ಕೇಂದ್ರ ಸರ್ಕಾರದ ನೋಟ್‌ಬ್ಯಾನ್‌ ತೀರ್ಮಾನದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಈ ಕುರಿತು ದೇಶದ ಯುವಪೀಳಿಗೆ ಸಂಘಟನೆಗಳ ಮೂಲಕ ಚರ್ಚೆ ನಡೆಸಬೇಕು. ದೇಶದ ಆರ್ಥಿಕತೆಯನ್ನು ನಾಶಗೊಳಿಸಿದ ನೋಟ್‌ಬ್ಯಾನ್‌ ಸಹ ಭಯೋತ್ಪಾದನೆ ಇದ್ದಂತೆ. ಕೇವಲ ಆವೇಶದ ಭಾಷಣದಿಂದ ದೇಶ ಬದಲಾವಣೆ ಕಾಣಲು ಸಾಧ್ಯವಿಲ್ಲ, ಹೀಗಾಗಿ ಹೊಸ ರಾಜಕೀಯ ಸಂಸ್ಕೃತಿ ಸೃಷ್ಟಿಯಾಗಬೇಕಿದ್ದು, ಚರ್ಚೆ ನಡೆಸಿ ಮನೆಗೆ ಹೋಗುವ ಬದಲು ಸಂಘಟನೆಗಳನ್ನು ಹುಟ್ಟುಹಾಕಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ವಾಸು, ಮುಕ್ತ ವಿವಿ ಪ್ರಾಧ್ಯಾಪಕ ಡಾ.ಪೃಥ್ವೀದತ್ತ ಚಂದ್ರ ಶೋಬಿ, ಲೇಖಕಿ ವಿ.ಕೆ.ಸಂಜ್ಯೋತಿ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌, ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಬೆಟ್ಟಯ್ಯಕೋಟೆ, ಚಂದ್ರಶೇಖರ್‌ ಮೇಟಿ, ಬಿ.ಕರುಣಾಕರ್‌, ಅಜೀಜ್‌, ಕೌಶನ್‌ ಬೇಗ್‌, ಅಭಿರುಚಿ ಗಣೇಶ್‌, ಸೀಮಾ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next