ಮೈಸೂರು: 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಲು ಮಲ್ಲಿಗೆ ನಗರಿ ಮೈಸೂರು ಸಜಾಗುತ್ತಿದೆ.ಜಿಲ್ಲಾಧಿಕಾರಿ ಡಿ.ರಂದೀಪ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜೂನ್ ತಿಂಗಳಾಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ತೀರ್ಮಾನಿಸಲಾಯಿತು.
ದಿನಾಂಕ ಮತ್ತು ಸಮ್ಮೇಳನ ನಡೆಸುವ ಸ್ಥಳದ ಬಗ್ಗೆಯೂ ಚರ್ಚೆ ನಡೆಯಿತು. ಜಿಲ್ಲಾ ಕಸಾಪ ಪದಾಧಿಕಾರಿಗಳು ಜೂನ್ 24 ರಿಂದ ಮೂರುದಿನಗಳ ಕಾಲ ಸಮ್ಮೇಳನ ಆಯೋಜಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಜತೆಗೆ ಅರಮನೆ ಆವರಣ ಅಥವಾ ದಸರಾ ವಸ್ತುಪ್ರದರ್ಶನ ಆವರಣದ ದೊಡ್ಡಕೆರೆ ಮೈದಾನವನ್ನು ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಚ್.ಸಿ.ಮಹದೇವಪ್ಪರ ಗಮನಕ್ಕೆ ತಂದು ದಿನಾಂಕ ಮತ್ತು ಸ್ಥಳ ಅಂತಿಮಗೊಳಿಸಲು ಸಭೆ ನಿರ್ಧರಿಸಿತು.
ಶಾಸಕ ಎಸ್.ಕೆ.ಸೋಮಶೇಖರ್ ಮಾತನಾಡಿ, 27 ವರ್ಷಗಳ ನಂತರ ಮೈಸೂರಿಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ದೊರೆತಿದ್ದು, ಗುರುವಾರ ರಾತ್ರಿ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಯವರ ಜತೆಗೆ ಈ ಸಂಬಂಧ ಚರ್ಚೆ ನಡೆಸಿದಾಗ ಅವರು ದಸರಾ ಆಚರಣೆಗೂ ಮುನ್ನ ಸಾಹಿತ್ಯ ಸಮ್ಮೇಳನ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾರ್ವಜನಿಕರ ಸಲಹೆಯನ್ನೂ ಪಡೆದು ಎಲ್ಲರ ಸಲಹೆಯಂತೆ ಯಶಸ್ವಿ ಸಮ್ಮೇಳನ ನಡೆಸೋಣ ಎಂದರು.
ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ನವೆಂಬರ್‌ನಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸುತ್ತಿರುವುದರಿಂದ ಇಲ್ಲಿ ದಸರಕ್ಕೂ ಮುನ್ನ ಸಮ್ಮೇಳನ ನಡೆಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ನಡೆದ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಸರ್ಕಾರ 4 ಕೋಟಿ ರೂ. ಅನುದಾನ ನೀಡಿದ್ದರೆ, ಮೈಸೂರಿನ ಸಮ್ಮೇಳನಕ್ಕೆ 5 ಕೋಟಿ ರೂ. ಮೀಸಲಿರಿಸಿದೆ.
ಜತೆಗೆ ಸ್ಥಳೀಯವಾಗಿಯೂ ಸಂಪನ್ಮೂಲ ಕ್ರೋಡೀಕರಣ ಮಾಡುವ ಮೂಲಕ ಯಶಸ್ವಿ ಸಮ್ಮೇಳನ ಆಯೋಜಿಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮ್ಮೇಳನದ ಯಶಸ್ಸಿನ ದೃಷ್ಟಿಯಿಂದ ಜಿಲ್ಲೆಯ ಚುನಾಯಿತ ಜನ ಪ್ರತಿನಿಧಿಗಳನ್ನು ಒಳಗೊಂಡ ಸ್ವಾಗತ ಸಮಿತಿ ರಚನೆ ಹಾಗೂ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯವರ ಗಮನಕ್ಕೆ ತಂದು ಸಮ್ಮೇಳನದ ಮುಖ್ಯ ವೇದಿಕೆಯ ಸ್ಥಳ ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮೈಸೂರು ಮಹಾ ನಗರಪಾಲಿಕೆ ಉಪ ಮೇಯರ್ ರತ್ನ ಲಕ್ಷ್ಮಣ್, ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಪದಾಧಿಕಾರಿಗಳಾದ ಚಂದ್ರಶೇಖರ್, ರಾಜಶೇಖರ ಕದಂಬ, ಮಡ್ಡಿಕೆರೆ ಗೋಪಾಲ್, ಮೂಗೂರು ನಂಜುಂಡಸ್ವಾಮಿ, ಕೆ.ಎಸ್.ಶಿವರಾಂ ಇತರರು ಹಾಜರಿದ್ದರು.