ಬಾಗಲಕೋಟೆ: 62 ವರ್ಷದ ವೃದ್ಧರೊಬ್ಬರು ಬರೋಬ್ಬರಿ 3.50 ಕಿಮೀ ದೂರದವರೆಗೆ ಕೃಷ್ಣಾ ನದಿಯಲ್ಲಿ ಈಜುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಮೊಹರಂ ಪ್ರಯುಕ್ತ ಬುಧವಾರ ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯಲ್ಲಿ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಹಿರಿಯರಾದ ಮಹಾದೇವಪ್ಪ ಮನಗೂಳಿ(62) ಎಂಬ ವೃದ್ಧರು, ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ಈಜಲು ಆರಂಭಿಸಿ, ಮಧ್ಯಾಹ್ನ 2 ಗಂಟೆ 45 ನಿಮಿಷಕ್ಕೆ (ಒಟ್ಟು 2 ಗಂಟೆ 35 ನಿಮಿಷ) ದಡ ಸೇರುವ ಮೂಲಕ ಮೊದಲ ಸ್ಥಾನ ಪಡೆದರು.
ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದಲ್ಲಿ ಮೊಹರಂ ನಿಮಿತ್ತ ಈಜು ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಲೋ ಸ್ವಿಮ್ಮಿಂಗ್ ಮಾಡಿ, ಯಾರು ಕೊನೆಯದಾಗಿ ದಡ ಸೇರುತ್ತಾರೋ ಅವರಿಗೆ ಗ್ರಾಮಸ್ಥರ ಪರವಾಗಿ 5 ತೊಲೆ ಬೆಳ್ಳಿ ಖಡ್ಗ ನೀಡಲು ತೀರ್ಮಾನಿಸಲಾಗಿತ್ತು. ಈ ಸ್ಪರ್ಧೆಗೆ ರೊಳ್ಳಿಯ ಇಬ್ಬರು ಶಿಕ್ಷಕರು, ಗಿರಿಸಾಗರದ ಓರ್ವ ಹೆಸ್ಕಾಂ ಜೆಇ, ಕೊರ್ತಿಯ ಇಬ್ಬರು ರೈತರು ಸೇರಿದಂತೆ ರೊಳ್ಳಿ, ಕೊರ್ತಿ, ಗಿರಿಸಾಗರ ಗ್ರಾಮಗಳ ಒಟ್ಟು 9 ಜನರು ಸ್ಪರ್ಧೆಗೆ ಸಜ್ಜಾದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ದಡದಿಂದ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ (ಕೊರ್ತಿ ಬಳಿ) ದಡದವರೆಗೆ ಕೃಷ್ಣಾ ನದಿ ಒಟ್ಟು 3.50 ಕಿಮೀ ದೂರವಿದೆ. ಬೃಹತ್ ಸೇತುವೆ ಕೆಳ ಭಾಗದಿಂದ ಒಟ್ಟು 9 ಜನರು ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ಗಂಗಾಪೂಜೆ ನೆರವೇರಿಸಿದ ಬಳಿಕ ಈಜು ಆರಂಭಿಸಿದರು. ಗ್ರಾಮದ ಕಾಂಗ್ರೆಸ್ ಮುಖಂಡ ಶಿವಾನಂದ ನಿಂಗನೂರ, ಸುಮಾರು ಒಂದು ಕಿಮೀ ದೂರ ಬಂದ ಬಳಿಕ, ಹೆಚ್ಚಿನ ತೆರೆ (ಚಿಕ್ಕ ಅಲೆ) ಬಂದಿದ್ದರಿಂದ ತೆಪ್ಪವೇರಿ ಈಜು ನಿಲ್ಲಿಸಿದರು. ಬಳಿಕ, ಸೇತುವೆಯ ಮೂರು ಕಂಬಗಳು ದಾಟುವವರೆಗೂ ತೆಪ್ಪದಲ್ಲಿ ಸಾಗಿ ಬಳಿಕ, ಮತ್ತೆ ಈಜಲು ಆರಂಭಿಸಿದರು.
ಉಳಿದ 8 ಜನರು ಈಜುತ್ತ ಕೊಲ್ಹಾರ ಕಡೆಯ ದಡದಿಂದ ಬೀಳಗಿ ತಾಲೂಕಿನ ಟಕ್ಕಳಕಿ ಕಡೆಯ ದಡಕ್ಕೆ ಬರುತ್ತಿದ್ದರು. ಒಂದೇ ಸ್ಥಳದಲ್ಲಿ ನಿಲ್ಲಲಾಗದೆ, ಮುಂಜಾಗ್ರತಾ ಕ್ರಮವಾಗಿ ಹಿಂದೆಯೇ ಇದ್ದ ತೆಪ್ಪವನ್ನೂ ಹತ್ತದೆ ನಿರಂತರ ಮತ್ತು ಸ್ಲೋ ಆಗಿ ಈಜುತ್ತ ಬರುವುದು ಹಲವರಿಗೆ ಕಷ್ಟವಾಯಿತು. ಹೀಗಾಗಿ, ಕೆಲವರು ಈಜುತ್ತ ವೇಗವಾಗಿ ದಡಕ್ಕೆ ಬಂದರು. ರೊಳ್ಳಿಯ ನಾಗಪ್ಪ ಬಿಳೆಂಡಿ ಎಂಬುವರು ಪ್ರಥಮವಾಗಿ ದಡಕ್ಕೆ ಬಂದರು.
ಗಿರಿಸಾಗರದ ಭೀಮಶಿ ಚೌಧರಿ ಎಂಬುವರು 2ನೇಯವರಾಗಿ ದಡ ಸೇರಿದರು. ಆದರೆ, ಮಹಾದೇವಪ್ಪ ಮನಗೂಳಿ ಅತಿ ಹೆಚ್ಚು ಕಾಲ (ಒಟ್ಟು 2 ಗಂಟೆ 35 ನಿಮಿಷ) ಈಜಿ ಕೊನೆಯವರಾಗಿ ದಡ ಸೇರಿದರು. ಆ ಮೂಲಕ ಪ್ರಥಮ ಬಹುಮಾನ ಗಳಿಸಿದರು.
22 ವರ್ಷ ಬಳಿಕ ನೀರಿಗಿಳಿದಿದ್ದರು
ಕೊರ್ತಿ ಗ್ರಾಮದ ರೈತ ಮಹಾದೇವಪ್ಪ ಮನಗೂಳಿ 22 ವರ್ಷಗಳಿಂದ ಈಜುವುದನ್ನೇ ಬಿಟ್ಟಿದ್ದರಂತೆ. ” ಈಜು ಸ್ಪರ್ಧೆ ಏರ್ಪಡಿಸಿದ್ದನ್ನು ರೊಳ್ಳಿಯ ನಮ್ಮ ಸ್ನೇಹಿತರು ತಿಳಿಸಿದರು. ಆಗ ನಾನು ಬಂದು ಭಾಗವಹಿಸಿದ್ದೆ. ಗೆಲ್ಲುವುದು ನನ್ನ ಗುರಿ ಆಗಿರಲಿಲ್ಲ. ಸಾಧ್ಯವಾದಷ್ಟು ಹೆಚ್ಚು ಸಮಯ ನದಿಯಲ್ಲಿ ಈಜಬೇಕು ಎಂದು ಬಂದಿದ್ದೆ. ಈಜುತ್ತ ನದಿಯ ಮಧ್ಯೆ ಬಂದಾಗ, ಸ್ವಲ್ಪ ಹೆದರಿಕೆ ಬಿಟ್ಟರೆ ಬೇರೆನೂ ಆಗಲಿಲ್ಲ’ ಎಂದು ಬೆಳ್ಳಿ ಖಡ್ಗ ಬಹುಮಾನ ಗೆದ್ದ ಮಹಾದೇವಪ್ಪ ಮನಗೂಳಿ
“ಉದಯವಾಣಿ’ಗೆ ತಿಳಿಸಿದರು.