Advertisement

ಶ್ರೀಕೃಷ್ಣ ಮಠದಲ್ಲಿ ಗೀತೆ, ಸಹಸ್ರನಾಮ ದೀಕ್ಷೆಗೆ 60 ದಿನ

12:20 AM Mar 18, 2020 | mahesh |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಿಂದ ನಿತ್ಯ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮದ ದೀಕ್ಷೆಯನ್ನು ಭಕ್ತರಿಗೆ ನೀಡಲಾಗುತ್ತಿದ್ದು ಎರಡು ತಿಂಗಳು ಪೂರೈಸಿದೆ. 2022ರ ಜ. 17ರ ವರೆಗೂ ಇದು ಮುಂದುವರಿಯಲಿದೆ.

Advertisement

ನಿತ್ಯ ಸಂಜೆ 4 ಗಂಟೆಗೆ ಶ್ರೀಕೃಷ್ಣ ಮಠದ ಗರ್ಭಗುಡಿ ಹೊರಗೆ ಚಂದ್ರಶಾಲೆಯಲ್ಲಿ ಪುರಾಣ ಪ್ರವಚನ ನಡೆಯುತ್ತದೆ. ಸುಮಾರು 5 ಗಂಟೆಗೆ ಪರ್ಯಾಯ ಶ್ರೀ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಭಗವದ್ಗೀತೆಯ ಒಂದು ಶ್ಲೋಕವನ್ನು ಹೇಳಿ ಅರ್ಥ ವಿವರಿಸುತ್ತಾರೆ. ಅದೇ ರೀತಿ ವಿಷ್ಣುಸಹಸ್ರನಾಮದ ಒಂದು ಪದದ ಅರ್ಥದ ಚಿಂತನೆ ಮಾಡುತ್ತಾರೆ. ನಿತ್ಯ 50-60 ಜನರು ಪಾಲ್ಗೊಳ್ಳುತ್ತಿದ್ದಾರೆ.

ಭಗವದ್ಗೀತೆಯಲ್ಲಿ 700 ಶ್ಲೋಕಗಳಿದ್ದು ದಿನಕ್ಕೊಂದು ಶ್ಲೋಕದ ಚಿಂತನೆ ನಡೆಸಿದರೆ ಎರಡು ವರ್ಷಗಳಲ್ಲಿ ಮುಗಿಯುತ್ತದೆ. ವಿಷ್ಣುಸಹಸ್ರನಾಮದ ಹೆಸರೇ ಹೇಳುವಂತೆ 1,000 ನಾಮಗಳಿವೆ. ಇದರಲ್ಲಿ ದಿನಕ್ಕೆ ಒಂದು ಹೇಳಿದರೆ ಎರಡು ವರ್ಷಗಳಲ್ಲಿ ಸ್ವಲ್ಪ ಬಾಕಿ ಆಗುತ್ತದೆ. ಆದ್ದರಿಂದ ಕೆಲವು ದಿನಗಳಲ್ಲಿ ಎರಡು ಪದಗಳ ಚಿಂತನೆ ನಡೆಸುವುದೂ ಇದೆ.

“ಕೆಲವು ಬಾರಿ ಜನರು ಹೆಚ್ಚಿಗೆ ಇರುತ್ತಾರೆ. ಕೆಲವು ಬಾರಿ ಹೊಸ ಹೊಸ ಜನರು ಬರುತ್ತಾರೆ. ವಿಷ್ಣುಸಹಸ್ರನಾಮದ ದೀಕ್ಷೆಯನ್ನು ಈಗಾಗಲೇ ಪಡೆದವರಿಗೆ ಇದರ ಧನಾತ್ಮಕ ಪರಿಣಾಮಗಳ ಅರಿವಿದೆ’ ಎನ್ನುತ್ತಾರೆ ಪುರಾಣ ಪ್ರವಚನಕಾರ ವಿ| ಕೃಷ್ಣರಾಜ ಭಟ್‌ ಕುತ್ಪಾಡಿಯವರು.

ಕೊರೊನಾ ನಿಗ್ರಹಕ್ಕೆ ಪರಿಣಾಮಕಾರಿ
ಈ ನಡುವೆ ಕೊರೊನಾ ವೈರಸ್‌ ಹಬ್ಬುತ್ತಿರುವಾಗ ವಿಷ್ಣುಸಹಸ್ರನಾಮ ಪಠನ ಯಾವುದೇ ವೈರಸ್‌ಗಳ ನಿಗ್ರಹಕ್ಕೆ ಪರಿಣಾಮಕಾರಿಯಾಗಿದೆ ಎನ್ನುವುದನ್ನು ಆಯುರ್ವೇದದ ಸುಶ್ರುತ ಗ್ರಂಥದಲ್ಲಿ ಆಯುರ್ವೇದಾಚಾರ್ಯ ಸುಶ್ರುತ ಉಲ್ಲೇಖೀಸಿರುವುದಾಗಿ ಉಡುಪಿ ಜಿಲ್ಲಾ ಆಯುಷ್‌ ಸಂಘದ ಅಧ್ಯಕ್ಷ ಡಾ| ಎನ್‌.ಟಿ. ಅಂಚನ್‌ ಬೆಟ್ಟು ಮಾಡಿದ್ದಾರೆ. ಕೆಲವು ವರ್ಷ ಹಿಂದೆ ಕಡಲಕೊರೆತ ತೀವ್ರವಾದಾಗ ಇಡೀ ಕರಾವಳಿಯಲ್ಲಿ ಸಾಮಾಜಿಕ ಕಾರ್ಯಕರ್ತ ಡಾ| ಎಸ್‌.ಎನ್‌.ಪಡಿಯಾರ್‌ ವಿಷ್ಣುಸಹಸ್ರನಾಮದ ಅಭಿಯಾನ ನಡೆಸಿದ್ದನ್ನು ಸ್ಮರಿಸಬಹುದು. “ನನ್ನಲ್ಲಿ ಯಾರೇ ಸಮಸ್ಯೆಗಳನ್ನು ತಂದರೂ ಅವರಿಗೆ ನಾನು ನೀಡುವ ಸಲಹೆ ವಿಷ್ಣುಸಹಸ್ರನಾಮ ಪಾರಾಯಣ’ ಎನ್ನುವುದನ್ನು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ತಿಳಿಸುತ್ತಾರೆ.

Advertisement

ಪ್ರತಿನಿತ್ಯ ಗೀತೆಯ ಒಂದೊಂದು ಶ್ಲೋಕ, ಒಂದೆರಡು ವಿಷ್ಣುಸಹಸ್ರನಾಮದ ಪದಗಳ ಚಿಂತನೆ ನಡೆಸಬೇಕೆಂದು ನಿರ್ಧರಿಸಿದ್ದೇವೆ. ಇವೆರಡರಿಂದಲೂ ಜನರಿಗೆ ಎಲ್ಲ ರೀತಿಯಲ್ಲಿಯೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಇದನ್ನು ನಡೆಸುತ್ತಿದ್ದೇವೆ.
– ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next