ಅಚಾನಕ್ ಆಗಿ ಸಾವು ಬಂದು ಎದುರು ನಿಂತಾಗ ನಾವೇನು ಮಾಡುತ್ತೇವೆ? ಒಂದ ಕ್ಷಣ ಕುಸಿಯುತ್ತೇವೆ. ಮತ್ತೆ ಸಾವರಿಸಿ ನಿಲ್ಲಲು ಪ್ರಯತ್ನಿಸುತ್ತೇವೆ. ಕೊನೆಗೆ ಹೋರಾಡಲು ಸಿದ್ಧರಾಗುತ್ತೇವೆ. ಜೀವನ ಎಂದರೆ ಇದೇ. ಇಲ್ಲಿ ಎದುರಾಗುವ ಸಣ್ಣ ಸಣ್ಣ ಸಂಕಷ್ಟಗಳಿಗೆ ನಾವು ಕುಸಿದು ಬೀಳುತ್ತೇವೆ. ಮತ್ತೆ ಹೋರಾಡಲು ನಮ್ಮಲ್ಲಿ ಚೈತನ್ಯವೇ ಇಲ್ಲ ಎಂದುಕೊಳ್ಳುತ್ತೇವೆ. ಆದರೆ ಅನಿವಾರ್ಯ ಪರಿಸ್ಥಿತಿಯೊಂದು ನಮ್ಮನ್ನು ಪ್ರತಿ ಸಂಕಷ್ಟದ ಪರಿಸ್ಥಿತಿಯಿಂದಲೂ ಪಾರು ಮಾಡುವ ಶಕ್ತಿ ಹೊಂದಿದೆ. ಇದೇ ಕಥೆಯನ್ನು ಆಧರಿಸಿ ‘ದಿ 33’ಚಿತ್ರ ನಿರ್ಮಿಸಿದ್ದಾರೆ ಪ್ಯಾಟ್ರಿಸಿಯಾ ರಿಗ್ಗೆನ್.
ಏನಾಗ್ತಿದೆ ಅಂತ ತಿರುಗಿ ನೋಡೋದ್ರೊಳಗೆ ಆ ಗಣಿಯೊಳಗೆ ದೊಡ್ಡ ಬಂಡೆ ಕುಸಿದಾಗಿತ್ತು. ಕ್ಷಣದÇ್ಲೇ ಕರೆಂಟ್ ಕೈಕೊಟ್ಟಿತು. ಒಳಗೆ ಸಿಲುಕಿದ್ದ 33 ಗಣಿ ಕಾರ್ಮಿಕರು ಕಂಗಾಲಾಗಿ ಕುಳಿತರು. ಅತ್ತರು, ಕೂಗಿದರು. ಆ ಧ್ವನಿಯನ್ನೂ ಗಣಿ ತನ್ನೊಳಗೆ ಹೂತು ಹಾಕಿತು. ಕುಡಿಯುವ ನೀರು, ತಿನ್ನುವ ಆಹಾರ, ನಾಲ್ಕೈದು ದಿನಕ್ಕೆ ಮಾತ್ರವೇ ಇತ್ತು. ರೇಡಿಯೋ ಸಿಗ್ನಲ್‌ಗಳು ಕೈಕೊಟ್ಟಿದ್ದರಿಂದ, ಇವರ ಆಕ್ರಂದನ ಮೇಲ್ಭಾಗದ ಕೇಂದ್ರವನ್ನೂ ತಲುಪದೆ ಹೋಯಿತು. ಹೆಡ್‌ಲೈಟ್ಗಳ ಮೂಲಕ ತಮ್ಮ ಅಸಹಾಯಕ ಮುಖಗಳನ್ನು ನೋಡಿಕೊಳ್ಳುತ್ತಾ, ಸಾವಿನ ಆಗಮನವನ್ನು ನೆನೆದು ಸಣ್ಣಗಾದರು.
‘ದಿ 33’ ಎಂಬ ಈ ಚಿತ್ರ ನೋಡುವಾಗ, ಗಣಿಯೊಳಗೆ ನಾವೇ ಅಡಗಿದ್ದೇವೇನೋ ಎಂಬ ಕತ್ತಲು, ಭಯಗಳು ಏಕಕಾಲಕ್ಕೆ ಆವರಿಸುತ್ತವೆ. ಚಿಲಿಯ ಸ್ಯಾನ್ ಜೋಸ್ ಗಣಿಯಲ್ಲಿ ನಡೆದ ನೈಜ ದುರಂತಕ್ಕೆ ಈ ಚಿತ್ರ ಕೆಮರಾ ಹಿಡಿದಿದೆ.
33 ಕಾರ್ಮಿಕರನ್ನು ಮೇಲೆತ್ತುವುದು ತನ್ನ ಕೆಲಸವಲ್ಲವೆಂದು ಗಣಿ ಕಂಪೆನಿ ನಿರ್ಲಕ್ಷ್ಯ ತೋರಿದಾಗ, ಚಿಲಿ ಸರಕಾರ ಕಾರ್ಯಾಚರಣೆಗೆ ಮುಂದಾಗುತ್ತದೆ. ಬೇರೆ ಬೇರೆ ಭಾಗಗಳಲ್ಲಿ ಬೋರ್ ಪಾಯಿಂಟ್ ಹೊಡೆದರೂ, ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೊಂದು ನಿರ್ದಿಷ್ಟ ಪಾಯಿಂಟ್‌ನಲ್ಲಿ ಬೋರ್ ಕೊರೆದಾಗ, ಕೆಳಗಿದ್ದ ಕಾರ್ಮಿಕನೊಬ್ಬ ನಾವೆಲ್ಲ ಜೀವಂತವಿದ್ದೇವೆ, ದಯವಿಟ್ಟು ಕಾಪಾಡಿ… ಎಂದು ಒಂದು ಚೀಟಿಯನ್ನು ಅಂಟಿಸಿ ಕಳಿಸಿದ. ಮಿಲಿಟರಿ ಸಿಬಂದಿ ಆಹಾರದ ಪಾಕೆಟ್‌ಗಳನ್ನು ಕೆಳಗಿಳಿಸಿ, ಬರೋಬ್ಬರಿ 2 ತಿಂಗಳು ಉಪವಾಸವಿದ್ದ, ಜೀವಗಳಿಗೆ ದೇವರೇ ಆದರು. ಕೊನೆಗೆ, ಅಷ್ಟೂ ಕಾರ್ಮಿಕರನ್ನೂ ಸುರಕ್ಷಿತವಾಗಿ ರಕ್ಷಿಸಲಾಗುತ್ತದೆ.
ಪ್ಯಾಟ್ರಿಸಿಯಾ ರಿಗ್ಗೆನ್ ನಿರ್ಮಾಣದ ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಕೆರಳಿಸುತ್ತಲೇ ಹೋಗುತ್ತದೆ. ಚಿತ್ರದ ಕೊನೆಯವರೆಗೂ ಸ್ವಾರಸ್ಯವನ್ನು ಹಿಡಿದಿಟ್ಟಿರುವ ಈ ಸಿನೆಮಾದ ಪ್ರತಿಯೊಂದು ಕ್ಷಣವೂ ಮನದಂಚಿನಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿದೆ.