Advertisement

ರಾಜ್ಯದ 2ನೇ ಅತೀದೊಡ್ಡ ಸರಕಾರಿ ಪಾಲಿಟೆಕ್ನಿಕ್‌…ಕೆಪಿಟಿಗೆ ಈಗ ಅಮೃತ ಘಳಿಗೆ

03:43 PM Jul 03, 2024 | Team Udayavani |

ಕೆಪಿಟಿ: ಕರಾವಳಿಯಲ್ಲಿ ತಾಂತ್ರಿಕ ಕ್ರಾಂತಿಗೆ ಮುನ್ನುಡಿ ಬರೆದ, ಸ್ವಾತಂತ್ರ್ಯ ಪೂರ್ವ ಕಾಲದಿಂದ ಇದುವರೆಗೆ ಲಕ್ಷಾಂತರ ತಂತ್ರಜ್ಞರನ್ನು ರೂಪಿಸಿ ದೇಶಕ್ಕೆ ಸಮರ್ಪಿಸಿದ ಮಂಗಳೂರಿನ ಹೆಮ್ಮೆಯ ಸಂಸ್ಥೆ ಕರ್ನಾಟಕ ಪಾಲಿಟೆಕ್ನಿಕ್‌(ಕೆಪಿಟಿ)ಗೆ ಈಗ “ಅಮೃತ’ ಕಾಲ!

Advertisement

1946ರಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಆಟೋಮೊಬೈಲ್‌ ಎಂಬ 4 ಡಿಪ್ಲೊಮಾ ಎಂಜಿನಿಯರಿಂಗ್‌ ಶಾಖೆಗಳೊಂದಿಗೆ ಸ್ಥಾಪನೆಯಾದ ಸಂಸ್ಥೆ ಅಮೃತ ಮಹೋ ತ್ಸವದ ಸಂಭ್ರಮದಲ್ಲಿದೆ. ರಾಜ್ಯದ ಎರಡನೇ ಅತಿದೊಡ್ಡ ಪಾಲಿಟೆಕ್ನಿಕ್‌ ಆಗಿ 1946ರಲ್ಲಿ ಜನ್ಮ ತಳೆದ ಕೆಪಿಟಿ 2021ರಲ್ಲಿ 75 ವರ್ಷಕ್ಕೆ ಕಾಲಿಟ್ಟಿತ್ತು. ಆದರೆ ಕೊರೊನಾ ಕಾರಣದಿಂದ ಆಚರಣೆ ಆಗಿರಲಿಲ್ಲ. ಈ ವರ್ಷ 75ರ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಹಳೆ ವಿದ್ಯಾರ್ಥಿ ಸಂಘದ
ಮುತುವರ್ಜಿಯಲ್ಲಿ ಶಾಲಾ ಆಡಳಿತ ವ್ಯವಸ್ಥೆಯ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.

ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರಾವಳಿಯ ವಿವಿಧ ಭಾಗದಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೊಸ ಕೋರ್ಸ್‌ಗಳನ್ನು ಕೂಡ ಇಲ್ಲಿ ನೀಡಲಾಗುತ್ತಿದ್ದು ಅಧ್ಯಾಪಕರು ಸಹಿತ ಸಿಬಂದಿ-ಹಳೆ ವಿದ್ಯಾರ್ಥಿಗಳ ಸಂಘಟಿತ ಶ್ರಮದಿಂದಾಗಿ ಇದು ಸಾಧ್ಯವಾಗಿದೆ.

ಅಮೃತ ಮಹೋತ್ಸವ ವಿಶೇಷ
ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸುಮಾರು 3 ಕೋ.ರೂ. ವೆಚ್ಚದಲ್ಲಿ ಕೆಪಿಟಿಯಲ್ಲಿ ಸುಸಜ್ಜಿತ “ಆಡಿಟೋರಿಯಂ’ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಂದ ಇದಕ್ಕೆ ಶಿಲಾನ್ಯಾಸ ನಡೆಸಲು ಮಾತುಕತೆ ನಡೆಯುತ್ತಿದೆ. ಅದೇ ರೀತಿ, ಕೆಪಿಟಿಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳನ್ನು ಜತೆಯಾಗಿ ಸೇರಿಸಿಕೊಂಡು ಹಳೆ ವಿದ್ಯಾರ್ಥಿಗಳ ಬೃಹತ್‌ “ಪುನರ್‌ ಮಿಲನ’ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ.

ಸಂಸ್ಥೆಯ ರಿಜಿಸ್ಟ್ರಾರ್‌ ಪುಸ್ತಕದಲ್ಲಿರುವ ಮಕ್ಕಳ ಹೆಸರು-ಸಂಖ್ಯೆಯ ಆಧಾರಿತವಾಗಿ ಅವರಿಗೆ ಪ್ರತ್ಯೇಕ ಪತ್ರ ಬರೆದು ಈ ವಿಚಾರವನ್ನು ತಿಳಿಸುವ ಕಾರ್ಯ ಸದ್ಯ ನಡೆಯುತ್ತಿದೆ.

Advertisement

ಪಾಂಡೇಶರದಲ್ಲಿ ಆರಂಭವಾದ ಕೆಪಿಟಿ!
ಕರ್ನಾಟಕ (ಸರಕಾರಿ) ಪಾಲಿಟೆಕ್ನಿಕ್‌ ಮಂಗಳೂರು 1946ರಲ್ಲಿ ಹಿಂದಿನ ಮದ್ರಾಸ್‌ ರಾಜ್ಯ ಸರಕಾರದ ಅಡಿಯಲ್ಲಿ ಪಾಂಡೇಶ್ವರದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಯಿತು. 1954ರಿಂದ ಮಂಗಳೂರಿನ ಕದ್ರಿ ಹಿಲ್ಸ್‌ನಲ್ಲಿರುವ ಪ್ರಸ್ತುತ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಸುಮಾರು 20 ಎಕ್ರೆ ವಿಸ್ತಾರವಾದ ಕ್ಯಾಂಪಸ್‌ನಲ್ಲಿದೆ. ಸಂಸ್ಥೆಯು ಎಂಜಿನಿಯರಿಂಗ್‌ ಶಿಕ್ಷಣದ ಮೂಲಕ ಮಂಗಳೂರು ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಪಾಲಿಟೆಕ್ನಿಕ್‌ ಸಂಪೂರ್ಣವಾಗಿ ಕರ್ನಾಟಕ ಸರಕಾರದಿಂದ ನಡೆಸಲ್ಪಡುತ್ತದೆ ಮತ್ತು ತಾಂತ್ರಿಕ ಶಿಕ್ಷಣ  ನಿರ್ದೇಶನಾಲಯದ ವ್ಯಾಪ್ತಿಯಲ್ಲಿದೆ.

ನವೆಂಬರ್‌ನಲ್ಲಿ “ಸಂಭ್ರಮ’ ಆಚರಣೆ

ಮಂಗಳೂರಿನ ಕೆಪಿಟಿಯ 75ರ ಸಂಭ್ರಮವನ್ನು ಅದ್ವಿತೀಯ ನೆಲೆಯಲ್ಲಿ ಆಚರಿಸಲು ಹಳೆ ವಿದ್ಯಾರ್ಥಿಗಳೆಲ್ಲರು ಸಂಕಲ್ಪ ತೊಟ್ಟಿದ್ದೇವೆ. ಆಡಿಟೋರಿಯಂ ರಚನೆಗೆ ಚಿಂತನೆ ಇದೆ. ಇಲ್ಲಿ ಕಲಿತ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಕರೆದು ಪುನರ್‌ ಮಿಲನ ಕಾರ್ಯಕ್ರಮ ರೂಪಿಸಲು ಕೂಡ ಉದ್ದೇಶಿಸಲಾಗಿದೆ. ನವೆಂಬರ್‌ನಲ್ಲಿ ಈ ಎಲ್ಲಾ ಕಾರ್ಯಕ್ರಮ ಆಚರಿಸಲು ತೀರ್ಮಾನ
ಕೈಗೊಳ್ಳಲಾಗುವುದು.
ದೇವಾನಂದ ಎಂ.ಸಿ.,
ಅಧ್ಯಕ್ಷರು, ಹಳೆ ವಿದ್ಯಾರ್ಥಿಗಳ ಸಂಘ-ಕೆಪಿಟಿ

75ನೇ ಸಂಭ್ರಮ ಸಂಕಲ್ಪ

ಕೆಪಿಟಿಯಲ್ಲಿ 8 ಡಿಪ್ಲೊಮಾ ಎಂಜಿನಿಯರಿಂಗ್‌ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಈ ವರ್ಷ ಸಂಸ್ಥೆಯ 75ನೇ ವರ್ಷಾಚರಣೆಯನ್ನು ಆಚರಿಸಲಾಗುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ನೆಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿದೆ. ಹಳೆ ವಿದ್ಯಾರ್ಥಿಗಳೆಲ್ಲರ ಸಮ್ಮಿಲನಕ್ಕೂ ಉದ್ದೇಶಿಸಲಾಗಿದೆ.
*ಹರೀಶ್‌ ಶೆಟ್ಟಿ,
ಪ್ರಾಂಶುಪಾಲರು-ಕೆಪಿಟಿ

Advertisement

Udayavani is now on Telegram. Click here to join our channel and stay updated with the latest news.

Next