Advertisement

ಮಂಗಳೂರು: ಬ್ರಹ್ಮಕಲಶಕ್ಕೆ ಮನೆಯಲ್ಲೇ ಬೆಳೆದ ಸಾವಯವ ತರಕಾರಿ!

03:41 PM Jul 05, 2024 | Team Udayavani |

ಮಹಾನಗರ: ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಿರುವ ತರಕಾರಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಭಕ್ತರು ಮನೆ ಯಲ್ಲೇ ಸಾವಯವ ಪದ್ಧತಿಯಲ್ಲಿ ಬೆಳೆದು ಕಾಣಿಕೆ ನೀಡುವ ವಿನೂತನ ಪರಿಕಲ್ಪನೆಗೆ ಇದೀಗ ಸಿದ್ಧತೆ ನಡೆಯುತ್ತಿದೆ.

Advertisement

ಮಂಗಳೂರು ಹೊರವಲಯದ ಮಂಚಿ ಸಮೀಪದ ಮೋಂತಿ ಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆ ಊರಿನ ಹಲವಾರು ಮನೆಯಲ್ಲಿ ವಿವಿಧ ತರಕಾರಿ ಬೇಸಾಯ ಮಾಡಿ ಬ್ರಹ್ಮಕಲಶದ ಅಡುಗೆಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಈ ಯೋಜನೆ ಕಾರ್ಯಗತಗೊಳ್ಳಲಿದೆ.

ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು ತಮ್ಮ ಮನೆಯಲ್ಲಿ ಬೀಜಾಂಕುರ ಮಾಡಿದ 20 ಸಾವಿರದಷ್ಟು ಸಾವಯವ ತರಕಾರಿ ಗಿಡಗಳನ್ನು ದೇವಾಲಯಕ್ಕೆ ನೀಡುತ್ತಾರೆ. ಅಲ್ಲಿಂದ ಸ್ಥಳೀಯ ರೈತರು-ಭಕ್ತರು ನಿಗದಿತ ಗಿಡಗಳನ್ನು ಪಡೆದು ತಮ್ಮ ಮನೆಯಲ್ಲಿಯೇ ಆ ಗಿಡ ನೆಟ್ಟು ತರಕಾರಿ ಬೆಳೆಯಬೇಕಾಗುತ್ತದೆ. ಹೀಗೆ ಬೆಳೆದ ತರಕಾರಿಯನ್ನು ದೇಗುಲದ
ಬ್ರಹ್ಮಕಲಶೋತ್ಸವಕ್ಕೆ ಬಳಸಲಾಗುತ್ತದೆ.

ಆಗಸ್ಟ್‌ ಕೊನೆಗೆ ಬೀಜಾಂಕುರ
ದೇವಸ್ಥಾನದ ಬ್ರಹ್ಮಕಲಶೋತ್ಸವವು 2025ರ ಜ. 6ರಿಂದ 13ರ ವರೆಗೆ ನಡೆಯಲಿದೆ. ಇದಕ್ಕಾಗಿ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಬೀಜಾಂಕುರ ಕಾರ್ಯಕ್ರಮ ಆಗಸ್ಟ್‌ ಕೊನೆ ವಾರದಲ್ಲಿ ನಡೆಯಲಿದೆ. ಗಿಡ ಬೆಳೆದು ನಾಟಿಗೆ 20 ದಿನ ಬೇಕಾಗುತ್ತದೆ. ಸೆಪ್ಟಂಬರ್‌ ಕೊನೆಯ ವಾರದೊಳಗೆ ಗಿಡಗಳ ವಿತರಣೆ ನಡೆಯಲಿದೆ. ವಿವಿಧ ತರಕಾರಿ ಬೇಸಾಯದ ಒಟ್ಟು ಅವಧಿ 90 ದಿನ.

ಯಾವುದೆಲ್ಲ ತರಕಾರಿ?
ಟೊಮೇಟೊ, ಬದನೆ, ಚೀನಿಕಾಯಿ, ಸೌತೆಕಾಯಿ, ಮುಳ್ಳು ಸೌತೆ, ಕುಂಬಳ ಕಾಯಿ, ಕಾಯಿ ಮೆಣಸು ಬೆಳೆಯಲಾಗುತ್ತದೆ. 250ಕ್ಕೂ ಅಧಿಕ ಮನೆಗಳನ್ನು ನಿಗದಿ ಮಾಡಲಾಗುತ್ತದೆ.

Advertisement

ಸಾವಯವ ಕೃಷಿಕ ಗ್ರಾಹಕ ಬಳಗ ಸದಸ್ಯರು 20 ಸಾವಿರ ವಿವಿಧ ತರಕಾರಿ ಗಿಡಗಳನ್ನು ಸಿದ್ಧಮಾಡಿ ಕೊಡುವ ನಿಟ್ಟಿನಲ್ಲಿ ತಯಾರಿ ಆಗುತ್ತಿದೆ. ವಿವಿಧ ತರಕಾರಿ ಬೀಜ ಮತ್ತು ಪ್ರೋ ಟ್ರೇ, ಕೊಕ್ಕೊಪೀಟ್‌ಗಳನ್ನು ಬಳಗ ಸದಸ್ಯರಿಗೆ ವಿತರಿಸಲಿದೆ. ಒಪ್ಪಿಗೆ ಕೊಟ್ಟ ಸದಸ್ಯರ ಮನೆಯಲ್ಲಿ ಬೀಜಾಂಕುರ ಕಾರ್ಯಕ್ರಮ ನಡೆಯಲಿದೆ. ಬೀಜಾಂಕುರ ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟಂಬರ್‌ ಮೊದಲ ವಾರ ನಡೆಸಲಾಗುತ್ತದೆ. 20 ದಿನದ ಬಳಿಕ ಗಿಡ ಗಳನ್ನು ದೇವಾಲಯಕ್ಕೆ ಹಸ್ತಾಂತರಿಸುತ್ತೇವೆ. *ರತ್ನಾಕರ ಕುಳಾಯಿ,
ಕಾರ್ಯದರ್ಶಿ, ಸಾವಯವ ಕೃಷಿಕ ಗ್ರಾಹಕ ಬಳಗ

ನಮ್ಮ ವ್ಯಾಪ್ತಿಯ ರೈತರು, ಭಕ್ತರಿಗೆ ಮುಂಚಿತವಾಗಿಯೇ ತರಕಾರಿ ಗಿಡವನ್ನು ನೀಡಿ ಸಾವಯವ ರೀತಿಯಲ್ಲಿಯೇ ಬೆಳೆಸಿ ಬ್ರಹ್ಮಕಲಶ ಸಂದ ರ್ಭದಲ್ಲಿ ಅನ್ನಪ್ರಸಾದ ಕಾರ್ಯಕ್ರಮಕ್ಕೆ ಸಮರ್ಪಿಸುವ ಹೊಸ ಸಂಕಲ್ಪ ಇರಿಸಲಾಗಿದೆ. ದೇವಾಲಯ ಪರಿಸರದಲ್ಲಿ ಸಾವಯವ ಕೃಷಿ ಜಾಗೃತಿ, ಧಾರ್ಮಿಕ ಒಗ್ಗಟ್ಟು ಬೆಳೆಸುವುದು ಇದರ ಉದ್ದೇಶ.
*ಎಸ್‌.ಆರ್‌. ಸತೀಶ್ಚಂದ್ರ, ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಮೋಂತಿಮಾರು

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next