Advertisement
ಇದಲ್ಲದೆ, ಲಾಲ್‌ಬಾಗ್ ಸಿದ್ದಾಪುರ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ವಾಹನ ಚಾಲಕರ ವಸತಿಗೃಹಗಳನ್ನೂ ತನ್ನ ವಶಕ್ಕೆ ತೆಗೆದುಕೊಂಡು ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದೆ. ಇದರೊಂದಿಗೆ ಈ ಸ್ಥಳಗಳಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗಳ ಜವಾಬ್ದಾರಿಯನ್ನು ಇನ್ನು ಮುಂದೆ ಸಚಿವಾಲಯ ನಿರ್ವಹಿಸಲಿದೆ.
ವಿಧಾನ ಮಂಡಲದ ಉಭಯ ಸದನಗಳ ವ್ಯಾಪ್ತಿಯ ಕಾಮಗಾರಿಗಳನ್ನು ಇದುವರೆಗೆ ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದ್ದುದು ಸಂವಿಧಾನ ಬಾಹಿರ ಮತ್ತು ಕಾನೂನು ಬಾಹಿರವಾಗಿದೆ..!ಹೌದು, 1984ರಲ್ಲಿ ಶಾಸಕಾಂಗದ ಸಚಿವಾಲಯಕ್ಕೆ ಆಡಳಿತಾತ್ಮಕ ಅಧಿಕಾರಗಳನ್ನು ಹಂಚಿಕೆ ಮಾಡಿ ಸರ್ಕಾರ ಅದನ್ನು ಸ್ವಾಯತ್ತಗೊಳಿಸಿತ್ತು. ಭಾರತದ ಸಂವಿಧಾನದಲ್ಲಿ ಶಾಸಕಾಂಗಕ್ಕೆ ಪ್ರತ್ಯೇಕ ಸ್ವಾಯತ್ತತೆ ಮತ್ತು ಸಾರ್ವಭೌಮತ್ವ ಇದೆ.
Related Articles
ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿರುವುದು ಸಂವಿಧಾನಬಾಹಿರ ಮತ್ತು ಕಾನೂನು ಬಾಹಿರ ಎಂದು ವಿಧಾನಸಭಾಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಕೂಡಲೇ ಉಭಯ ಸದನಗಳ ಪೀಠಾಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ಕರೆಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹಲವು ಸುತ್ತಿನ ಸಭೆ ನಡೆಸಿ ಲೋಕೋಪಯೋಗಿ ಇಲಾಖೆ ನಡೆಸುತ್ತಿದ್ದ ಕಾಮಗಾರಿಗಳನ್ನು ಸಚಿವಾಲಯವೇ ನಡೆಸಲು ತೀರ್ಮಾನಿಸಿದೆ.
Advertisement
ಆದೇಶದಲ್ಲಿ ಏನಿದೆ?– ಬೆಂಗಳೂರಿನ ಶಾಸಕರ ಭವನ, ಲಾಲ್‌ಬಾಗ್, ಸಿದ್ದಾಪುರ ಮತ್ತು ಕ್ರೆಸೆಂಟ್ ರಸ್ತೆಯಲ್ಲಿರುವ ವಾಹನ ಚಾಲಕರ ವಸತಿಗೃಹಗಳ ಆಸ್ತಿಯ ಮಾಲಿಕತ್ವವನ್ನು ವಿಧಾನಸಭೆ ಸಚಿವಾಲಯ ಪಡೆಯುವುದು.
– ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದ ಹಿಂಭಾಗದಲ್ಲಿರುವ ಗ್ರೂಪ್ ಡಿ ನೌಕರರ ವಸತಿ ಗೃಹದ 2.2 ಎಕರೆ ಖಾಲಿ ಜಾಗದಲ್ಲಿ ಕಾನ್‌ಸ್ಟಿಟ್ಯೂಷನಲ್ ಕ್ಲಬ್ ನಿರ್ಮಾಣಕ್ಕೆ ಆಸ್ತಿಯ ಮಾಲೀಕತ್ವ ಪಡೆದು ಕಾನ್‌ಸ್ಟಿಟ್ಯೂಷನಲ್ ಕ್ಲಬ್ ನಿರ್ಮಿಸುವುದು.
– ಬೆಂಗಳೂರಿನಲ್ಲಿ ಲಭ್ಯವಿರುವ ಸ್ಥಳದಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರದಿಂದ ಪಡೆದು ಅಲ್ಲಿ ಲೆಜಿಸ್ಲೇಚರ್ ಟೌನ್‌ಶಿಪ್ ನಿರ್ಮಾಣ. ವಿಧಾನಸೌಧ ಕಟ್ಟಡದಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಕೆಲವು ಭಾಗಗಳ ಹಾಗೂ ಶಾಸಕರ ಭವನದ ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿಗಳ ಜವಾಬ್ದಾರಿಯನ್ನು ನಿರ್ವಹಣೆ ಮಾಡುವುದು.
– 2017ರ ಏ.1ರಿಂದ ಪೂರ್ವಾನ್ವಯವಾಗುವಂತೆ ಬೆಳಗಾವಿಯ ಸುವರ್ಣ ವಿಧಾನಸೌಧದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ವಿಧಾನಸಭೆ ಸಚಿವಾಲಯದಿಂದಲೇ ನಿರ್ವಹಿಸುವುದು.
– ಬೆಳಗಾವಿ ಸುವರ್ಣ ವಿಧಾನಸೌಧದ ನಿರ್ವಹಣೆ ಸಂಬಂಧ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಹಾಲಿ ಇರುವ ವ್ಯವಸ್ಥೆ ಮುಂದುವರಿಸುವುದು. ಪ್ರಸ್ತುತ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು/ ಹೊರ ಸಂಪನ್ಮೂಲದ ಸಿಬ್ಬಂದಿಗೆ ಹಣ ಪಾವತಿ/ ವೇತನ, ಭತ್ಯೆಗಳನ್ನು ಸಚಿವಾಲಯದ ವತಿಯಿಂದ ಪಾವತಿಸುವುದು.
– ಬೆಳಗಾವಿ ಸುವರ್ಣ ವಿಧಾನಸೌಧದ ಆಸ್ತಿ ಮಾಲಿಕತ್ವ, ರಕ್ಷಣೆ, ಸರ್ವ ರೀತಿಯ ಅಭಿವೃದ್ಧಿ ಇತ್ಯಾದಿ ಜವಾಬ್ದಾರಿಗಳನ್ನು ವಿಧಾನಸಭೆ ಸಚಿವಾಲಯವೇ ನಿರ್ವಹಿಸುವುದು.
– ಕರ್ನಾಟಕ ವಿಧಾನಸಭೆಯ ಸಚಿವಾಲಯಕ್ಕೆ ಅಗತ್ಯವಾದ ಅನುದಾನಗಳನ್ನು ಆರ್ಥಿಕ ಇಲಾಖೆಯಿಂದ ಪಡೆಯಲು ಸಂಪೂರ್ಣ ಅಧಿಕಾರ.
– ವಿಧಾನಸಭೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ರೀತಿಯ ಸಿವಿಲ್/ ವಿದ್ಯುತ್ ಸಂಬಂಧಿತ ಕಟ್ಟಡ ಕಾಮಗಾರಿಗಳ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹೆ, ಸೂಚನೆ ಪಡೆಯಲು ಹೊರಗುತ್ತಿಗೆ ಆಧಾರದ ಮೇಲೆ ನುರಿತ ಯೋಜನೆ ನಿರ್ವಹಣಾ ಸಲಹೆಗಾರರ ಸೇವೆ ಪಡೆಯುವುದು.